ಮತ್ತೆ ಶುರುವಾದ ಸೆನ್ಸಾರ್ ಕೆಲಸ

page 10 2
Published on

ಬೆಂಗಳೂರು: ಲಾಕ್​ಡೌನ್ ತೆರವಾಗುತ್ತಿದ್ದಂತೆಯೇ, ಕ್ರಮೇಣ ಕನ್ನಡ ಚಿತ್ರರಂಗದ ಚಟುವಟಿಕೆಗಳು ಸಹ ಪ್ರಾರಂಭವಾಗಿವೆ. ಕಳೆದ ತಿಂಗಳು, ಕನ್ನಡ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಅನುಮತಿ ನೀಡಲಾಗಿತ್ತು. ಇದೀಗ ಸೆನ್ಸಾರ್ ಕೆಲಸಗಳು ಸಹ ಪ್ರಾರಂಭವಾಗಿವೆ.

ಜೂನ್ ಒಂದರಿಂದ ಸೆನ್ಸಾರ್ ಮಂಡಳಿ ಪುನಃ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವಾರದಲ್ಲಿ ಎಂಟು ಚಿತ್ರಗಳನ್ನು ನೋಡಿ ಪ್ರಮಾಣಪತ್ರವನ್ನು ನೀಡಿದೆ. ಈ ಪೈಕಿ ಮೊದಲು ನೋಡಿದ ಚಿತ್ರ ಎಂದರೆ, ಅದು ಶ್ರೀನಾಥ್ ವಸಿಷ್ಠ ನಿರ್ದೇಶನದ ‘ಮೂಕಜೀವ’. ಇನ್ನು ಅರವಿಂದ್ ಕೌಶಿಕ್ ನಿರ್ದೇಶನದ ‘ಶಾರ್ದೂಲ’, ನವೀನ್ ಕೃಷ್ಣ ನಿರ್ದೇಶನದ ‘ಮೇಲೊಬ್ಬ ಮಾಯಾವಿ’ ಮುಂತಾದ ಚಿತ್ರಗಳನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಕರೊನಾ ಸೋಂಕು ಹರಡುವ ಭಯದಲ್ಲಿ ಸರ್ಕಾರವು, ಚಿತ್ರ ಪ್ರದರ್ಶನವನ್ನು ಮಾರ್ಚ್ ತಿಂಗಳಲ್ಲಿ ರದ್ದು ಮಾಡಿತ್ತು. ಅದರಂತೆ, ಮಾರ್ಚ್ 17ರಂದು ಕೊನೆಯದಾಗಿ ಚಿತ್ರ ನೋಡಿದ್ದ ಸೆನ್ಸಾರ್ ಮಂಡಳಿಯು, ಚಟುವಟಿಕೆಗಳನ್ನು ಸ್ಥಗಳಿಸಿತ್ತು. ಕಳೆದೊಂದು ವಾರದಿಂದ ಚಿತ್ರ ವೀಕ್ಷಣೆಯನ್ನು ಸೆನ್ಸಾರ್ ಮಂಡಳಿ ಪ್ರಾರಂಭಿಸಿದ್ದು, ದಿನಕ್ಕೊಂದರಂತೆ ಚಿತ್ರ ನೋಡುತ್ತಿದೆ. ಸೆನ್ಸಾರ್ ಆಗಬೇಕಿರುವ ಚಿತ್ರಗಳ ಸಂಖ್ಯೆ ಜಾಸ್ತಿ ಇರುವುದರಿಂದ, ಮುಂದಿನ ದಿನಗಳಲ್ಲಿ ದಿನಕ್ಕೆರಡರಂತೆ ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net