ಇದು ಯುದ್ಧ ಮಾಡುವ ಹೊತ್ತಲ್ಲ

War
Published on
ಲಡಾಖ್ ಗಡಿಯಲ್ಲಿ ಚೀನಾ ಅಪ್ರಚೋದಿತ ದಾಳಿಯಿಂದಾಗಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಅನಿರೀಕ್ಷಿತ ದಾಳಿಯಿಂದಾಗಿ ಇಡೀ ದೇಶ ಸೈನಿಕರನ್ನು ಕಳೆದುಕೊಂಡ ನೋವಿನಲ್ಲಿದೆ. ಹೀಗಿರುವಾಗಲೇ ಹುತಾತ್ಮ ಸೈನಿಕರಿಗೆ ಸ್ಯಾಂಡಲ್​ವುಡ್ ತಾರೆಯರು ನಮನ ಸಲ್ಲಿಸಿದ್ದಾರೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಸಿನಿಮಾ ಮಂದಿ ಚೀನಿಯರ ಈ ಕಪಟ ಬುದ್ಧಿಗೆ ತಕ್ಕ ಶಾಸ್ತಿ ಆಗಲಿದೆ ಎಂದಿದ್ದಾರೆ
ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕು
ಕನಸು ಮನಸಿನಲ್ಲೂ ಇಂಥದ್ದೊಂದು ದುರಂತ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಯಾಕೆ ಚೀನಾ ಹೀಗೆ ಮಾಡಿತು ಎಂಬುದನ್ನೂ ಅರಿತುಕೊಳ್ಳಬೇಕು. ಇದರ ಹಿಂದೆ ಏನೆಲ್ಲ ರಣತಂತ್ರ ಇದೆ ಎಂಬುದನ್ನು ಪತ್ತೆ ಮಾಡಬೇಕು. ಯುದ್ಧದ ಸನ್ನಿವೇಶ ನಿರ್ವಣವಾಗಿದೆ, ಸಾವು-ನೋವು ಸಹಜ ಎಂದಾದರೆ ಸಹಿಸಿಕೊಳ್ಳಬಹುದು. ಆದರೆ, ಯಾವ ಯುದ್ಧವೂ ಇಲ್ಲ. ಇಂಥ ಹೊತ್ತಲ್ಲಿ ಸುಖಾ ಸುಮ್ಮನೆ ಜೀವ ಕಳೆದುಕೊಳ್ಳುವ ಅವಶ್ಯಕತೆ ಏನಿದೆ. ನಾನೂ ಆರ್ವಿು ಕುಟುಂಬದವಳೇ. ನನ್ನ ತಂದೆಯೂ ಆರ್ವಿುಯಲ್ಲಿ ಇದ್ದವರೇ. ಆ ಸಾವಿನ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಒಬ್ಬ ಯೋಧ ಸಾವನ್ನಪ್ಪಿದರೆ ದೇಶ ಒಂದು ದಿನ ಅಳುತ್ತದೆ. ಅದೇ ಯೋಧನ ಕುಟುಂಬ ಸಾಯುವವರೆಗೂ ನೋವನ್ನು ಅನುಭವಿಸುತ್ತಿರುತ್ತದೆ. ಹಾಗಾಗಿ ಯಾಕೆ ಈ ತಂಟೆ ಆಯಿತೆಂದು ಸರ್ಕಾರ ಮತ್ತು ಆರ್ವಿು ಅರಿತು ಮುಂದಿನ ಕ್ರಮ ಕೈಗೊಳ್ಳಬೇಕು. | ರಾಗಿಣಿ ದ್ವಿವೇದಿ ಅನಿರೀಕ್ಷಿತ ದಾಳಿ ಇದು...

ಒಂದು ಕ್ಷಣ ನಿಜಕ್ಕೂ ಭಯವಾಯಿತು. ಯಾಕೆ ಹೀಗೆಲ್ಲ ಆಗುತ್ತಿದೆ ಎಂದೆನಿಸಿತು. ಈವರೆಗೂ ಇಂಡೋ ಪಾಕ್ ಯುದ್ಧದ ಬಗ್ಗೆ ಕೇಳುತ್ತ ಬಂದಿದ್ದೆವು. ಯಾವತ್ತೂ ಇಂಡೋ-ಚೀನಾ ನಡುವೆ ಈ ರೀತಿಯ ಒಂದು ಕಾಳಗ ನಡೆಯುತ್ತಿದೆ ಎಂದು ಕನಸಲ್ಲೂ ಅನಿಸಿರಲಿಲ್ಲ. ಯುದ್ಧದ ಸಮಯ

ಅಲ್ಲದಿದ್ದರೂ, ನಮ್ಮ ಸೈನಿಕರು ಮೃತಪಟ್ಟಿದ್ದಾರೆ. ಚೀನಾ ಸೈನಿಕರೂ ಸಾವನ್ನಪ್ಪಿದ್ದಾರೆ. ಕರೊನಾ ನಡುವೆಯೂ ಯಾಕೆ ಈ ರೀತಿ ನಡೆಯುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಆದರೂ ಭಾರತ ಭಯಪಡುವ ಅಗತ್ಯ ಇಲ್ಲ. ನಮ್ಮ ದೇಶ ಅತ್ಯುತ್ತಮ ನಾಯಕನನ್ನು ಹೊಂದಿದೆ. ಅವರಿಂದ ಒಂದೊಳ್ಳೆಯ ನಿರ್ಧಾರ ಹೊರಬರಲಿದೆ ಎಂಬ ಆಶಾಭಾವ ಇದ್ದೇ ಇದೆ. ಗಡಿವಿಚಾರಕ್ಕೆ ಸಂಬಂಧಿಸಿದಂತೆ ಪ್ರೀತಿ ಕೇಳಿದರೆ ಪ್ರೀತಿ ಕೊಟ್ಟರಾಯ್ತು. ಯುದ್ಧಾನೇ ಬೇಕು ಎನ್ನುವವರಿಗೆ ಅದೇ ರೀತಿ ಉತ್ತರಿಸಬೇಕಾಗುತ್ತದೆ. ಈಗ ನಮ್ಮ ಸೇನೆ ಮಾಡಿದ್ದೂ ಅದೇ.

| ಶ್ರೀಮುರಳಿ

ಭರವಸೆ ಕಳೆದುಕೊಳ್ಳುವುದಿಲ್ಲ

ಕರೊನಾ ಹಾವಳಿ ನಡುವೆ, ಇಂಥ ಗಡಿ ತಂಟೆ ತಕರಾರು ನಡೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಆ ಗಡಿಯ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ನಾನು ಡಾಕ್ಯುಮೆಂಟರಿಯೊಂದನ್ನು ನೋಡಿದೆ. ಗಾಲ್ವಾನ್​ನಲ್ಲಿನ ವಾತಾವರಣ, ಕಡಿದಾದ ದಾರಿ, ಮೊನಚು ಕಲ್ಲುಗಳು ನಿಜಕ್ಕೂ ಭಯ ಹುಟ್ಟಿಸುತ್ತದೆ. ಅಂಥದರಲ್ಲಿ ಯಾವ ಕಾರಣಕ್ಕೆ ಈ ಸಂಘರ್ಷ ಎಂದೇ ಗೊತ್ತಾಗಲಿಲ್ಲ. ಜೀವ ನಮ್ಮವರದಾದರೇನು, ಚೀನಾದವರದಾದರೇನು. ಒಟ್ಟಿನಲ್ಲಿ ಎರಡೂ ಕಡೆಗಳಲ್ಲಿ ಸಾವು ನೋವಾಗಿದೆ. ಇದೆಲ್ಲವನ್ನು ಬದಿಗಿಟ್ಟರೆ, ನಮ್ಮ ಸೈನಿಕರೇ ನಮಗೆ ಮುಖ್ಯ. 20 ಜನ ಸಾವನ್ನಪ್ಪಿದ್ದಾರೆಂದರೆ ಅದು ಸಣ್ಣ ವಿಚಾರವೇ ಅಲ್ಲ. ಒಂದೊಂದು ಸಾವಿನ ಹಿಂದೆ ಅದೆಷ್ಟೂ ಕಥೆಗಳಿರುತ್ತವೆ, ಅದೆಷ್ಟು ಕಣ್ಣೀರಿರುತ್ತದೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂಬುದನ್ನು ಹೇಳಬೇಕು. ಅತ್ಯುತ್ತಮ ನಾಯಕನನ್ನು ದೇಶ ಹೊಂದಿರುವುದರಿಂದ ಭಾರತ ಯಾವತ್ತೂ ಭರವಸೆ ಕಳೆದುಕೊಳ್ಳುವುದಿಲ್ಲ. ಇನ್ನು ಚೀನಾ ಉತ್ಪನ್ನಗಳ ಬಗ್ಗೆ ಹೇಳಬೇಕೆಂದರೆ, ನಾವೇ ನಮ್ಮವರಿಗಾಗಿ ವಸ್ತುಗಳನ್ನು ತಯಾರಿಸಬೇಕು. ಅದರಿಂದ ಸಣ್ಣಕೈಗಾರಿಕೆಗಳಿಗೆ ಅನುಕೂಲ ಆಗುತ್ತದೆ. ಉದ್ಯೋಗ ಸಿಗುತ್ತದೆ. ನಾನು ಏನೇ ಖರೀದಿ ಮಾಡಬೇಕೆಂದರೂ, ಎಲ್ಲಿ ಉತ್ಪಾದನೆಯಾಗಿದೆ ಎಂಬುದನ್ನು ನೋಡಿಯೇ ಖರೀದಿಸುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಪೂರೈಕೆ ಕಡಿಮೆ ಇರುವುದರಿಂದ ಅನಿವಾರ್ಯವಾಗಿ ಖರೀದಿಸುತ್ತಾರೆ.

| ರಕ್ಷಿತ್ ಶೆಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net