ಸೆಲೆಬ್ರಿಟಿಗಳ ಸರೊಗಸಿ ಸಹವಾಸ; ಬಾಡಿಗೆ ತಾಯಿಯ ಮೂಲಕ ಸ್ವಂತ ಮಗು

nayana thara
ಮಗುವಿನೊಂದಿಗೆ ನಯನತಾರಾ, ಸಂಸಾರದೊಂದಿಗೆ ಸನ್ನಿ ಲಿಯೋನ್
Published on
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ತಂದೆ ತಾಯಿಯಾದ ಸುದ್ದಿ ಹಂಚಿಕೊಂಡಿದ್ದರು. ಮಕ್ಕಳ ಪಾದಗಳಿಗೆ ಮುತ್ತಿಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದರು. ಕಳೆದ ಜೂನ್ 9ರಂದು ಮದುವೆಯಾಗಿದ್ದ ಈ ಜೋಡಿ ಕೇವಲ ನಾಲ್ಕು ತಿಂಗಳಲ್ಲೇ ಅವಳಿ ಮಕ್ಕಳಿಗೆ ಪಾಲಕರಾಗಿಬಿಟ್ರಾ ಅಂತ ಕೇಳಿದರೆ, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಎಂಬುದು ಅವರ ಆಪ್ತರಿಂದ ಬಹಿರಂಗವಾಗಿದೆ. ಅದರ ಬೆನ್ನಲ್ಲೇ ಈ ಪ್ರಕ್ರಿಯೆ ಕಾನೂನಿನ ಚೌಕಟ್ಟಿನಲ್ಲಿ ನಡೆದಿದೆಯಾ ಎಂಬ ಪ್ರಶ್ನೆಯೂ ಮೂಡಿದೆ. ಹೀಗಾಗಿಯೇ ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್, ನಯನ್ ಮತ್ತು ಶಿವನ್​ರನ್ನು ವಿಚಾರಣೆಗೆ ಒಳಪಡಿಸಲು ಆರೋಗ್ಯ ಸೇವೆ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚಿಸಿದ್ದು, ತನಿಖೆ ಆರಂಭವಾಗಿದೆ. ಇಷ್ಟಕ್ಕೂ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡರೆ ತಪ್ಪೇನು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣಗಳಿವೆ. (ಸರೊಗಸಿ) ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಬಂಜೆತನ. ಸಲಿಂಗ ದಂಪತಿಗಳೂ ಸಹ ಸರೊಗಸಿ ಮೂಲಕ ಪಾಲಕರಾಗಬಹುದು ಅಥವಾ ಮದುವೆಯೇ ಬೇಡ ಎನ್ನುವ ಮಹಿಳೆ, ಪುರುಷರು ಕೂಡ ಸರೊಗಸಿ ಮೂಲಕ ಮಗು ಪಡೆಯಬಹುದು. ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ಗರ್ಭಧಾರಣೆ ಸುಲಭವಿರುವುದಿಲ್ಲ. ಆ ಸಮಯದಲ್ಲೂ ಸರೊಗಸಿಯ ಆಯ್ಕೆಯಿದೆ. ದೀರ್ಘವಾದ ಆರೋಗ್ಯ ಸಮಸ್ಯೆಯಿದ್ದು, ಔಷಧ ಪಡೆಯುತ್ತಿರುವವರು, ದತ್ತು ಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕೆಂಬ ಕಾರಣಕ್ಕೆ ಸರೊಗಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

| ಹರ್ಷವರ್ಧನ್ ಬ್ಯಾಡನೂರು

ಬಾಡಿಗೆ ತಾಯ್ತನ ಟ್ರೆಂಡ್ ಹೆಚ್ಚಾಗಲು ಕಾರಣವೇನು?

ಬಾಡಿಗೆ ತಾಯ್ತನ ಎನ್ನುವುದು ಸೆಲೆಬ್ರಿಟಿಗಳಲ್ಲಿ, ಹಣವಂತರಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಸೆಲೆಬ್ರಿಟಿಗಳು ಒಂಭತ್ತು ತಿಂಗಳು ಗರ್ಭಧರಿಸಿ, ಎರಡು ಮೂರು ವರ್ಷಗಳ ಕಾಲ ಮಗುವಿನ ಲಾಲನೆ, ಪಾಲನೆಯಲ್ಲಿ ಸಮಯ ಕಳೆದರೆ ಕರಿಯರ್ ಕೆಳಮುಖವಾಗುವ ಭಯ ಅವರನ್ನು ಕಾಡುತ್ತಿದೆ. ಅಷ್ಟೇ ಅಲ್ಲ, ಗರ್ಭಧಾರಣೆಯಾದರೆ ಅದು ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹವನ್ನು ಮೊದಲಿನಂತೆ ಕಾಪಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಆ ಕಾರಣಕ್ಕೆ ಬಹಳಷ್ಟು ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೊರೆ ಹೋಗುತ್ತಿದ್ದಾರೆ.

ಒಳ್ಳೆಯದಾ? ಕೆಟ್ಟದಾ?

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯವುದು ಒಳ್ಳೆಯದಾ? ಕೆಟ್ಟದಾ? ಈ ಚರ್ಚೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಲೇಯಿದೆ. ಅದಕ್ಕೆ ಕಾರಣ ಭಾರತದಲ್ಲಿ ಇದುವರೆಗೂ ಬಾಡಿಗೆ ತಾಯ್ತನದ ಕುರಿತು ಜಾಗೃತಿ ಇಲ್ಲದಿರುವುದು ಒಂದಾದರೆ, ಅದು ದುರುಪಯೋಗವಾಗುವ ಆತಂಕ ಮತ್ತೊಂದು. ಹೀಗಾಗಿಯೇ ದತ್ತು ಪಡೆಯವುದನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು, ಸರೊಗಸಿ ನಿಷೇಧಿಸಬೇಕು ಎಂಬ ಒತ್ತಡವೂ ಇದೆ. ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಮಲೇಷ್ಯಾ, ಸೇರಿದಂತೆ ಹಲವು ದೇಶಗಳಲ್ಲಿ ಸರೊಗಸಿಯನ್ನು ನಿಷೇಧಿಸಲಾಗಿದೆ. ಸ್ವೀಡನ್, ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಈ ಕುರಿತು ಕಾನೂನೇ ಇಲ್ಲ. ಇನ್ನು ಭಾರತ, ಬ್ರಿಟನ್, ಅಮೆರಿಕಾ, ರಷ್ಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸರೊಗಸಿಗೆ ಕಾನೂನಿನ ಚೌಕಟ್ಟಿನಲ್ಲೇ ಅವಕಾಶ ನೀಡಲಾಗಿದೆ.

ಭಾರತೀಯ ಕಾನೂನು ಏನನ್ನುತ್ತೆ?

  • ಗಂಡ, ಹೆಂಡತಿ ಮದುವೆಯಾಗಿ ಐದು ವರ್ಷಗಳಾಗಿರಬೇಕು
  • ಮಕ್ಕಳಿರಬಾರದು, ಗರ್ಭಧಾರಣೆ ಆಗುವುದಿಲ್ಲ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿರಬೇಕು
  • ಹೆಂಡತಿಯ ವಯಸ್ಸು 23ರಿಂದ 50 ಹಾಗೂ ಗಂಡನ ವಯಸ್ಸು 26ರಿಂದ 55 ವರ್ಷದ ಒಳಗಿರಬೇಕು
  • ವಾಣಿಜ್ಯ ಉದ್ದೇಶಕ್ಕಾಗಿ ಇರಬಾರದು, ಬಾಡಿಗೆ ತಾಯಿಗೆ ವೈದ್ಯಕೀಯ ಖರ್ಚನ್ನು ಮಾತ್ರ ನೀಡಬೇಕು
  • ಕಾನೂನು ಉಲ್ಲಂಘನೆಯಾದಲ್ಲಿ 10 ವರ್ಷದವರೆಗೆ ಜೈಲು, 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಸರೊಗಸಿಯಿಂದ ಪಾಲಕರಾದ ಸೆಲೆಬ್ರಿಟಿಗಳು

ಬಾಡಿಗೆ ತಾಯಿ ಮೂಲಕ ಮಗು ಪಡೆದಿರುವುದು ತಾರಾ ಲೋಕದಲ್ಲಿ ಹೊಸತೇನಲ್ಲ. ಈಗ ನಯನತಾರಾ, ವಿಘ್ನೇಶ್ ಶಿವನ್ ಆ ಸಾಲಿಗೆ ಹೊಸದಾಗಿ ಸೇರಿದ್ದಾರಷ್ಟೇ. ಕಳೆದ ಒಂದು ದಶಕದಿಂದ ಹತ್ತಕ್ಕೂ ಹೆಚ್ಚು ಮಂದಿ ಸೆಲೆಬ್ರಿಟಿಗಳು ಸರೊಗಸಿ ಮೂಲಕ ಅಪ್ಪ/ಅಮ್ಮ ಆಗಿದ್ದಾರೆ. ಅವರಲ್ಲಿ ಬಾಲಿವುಡ್ ಸ್ಟಾರ್​ಗಳೇ ಹೆಚ್ಚು. ಆಮಿರ್ ಖಾನ್, ಕಿರಣ್ ರಾವ್ ದಂಪತಿ ಈ ಪ್ರಕ್ರಿಯೆ ಅನುಸರಿಸಿದ ಮೊದಲಿಗರ ಸಾಲಿನಲ್ಲಿದ್ದಾರೆ. 2011ರ ಡಿಸೆಂಬರ್​ನಲ್ಲಿ ಸರೊಗಸಿ ಮೂಲಕ ಅವರು ಆಜಾದ್ ಖಾನ್​ಗೆ ಅಪ್ಪ-ಅಮ್ಮ ಆದರು. ಸೊಹೈಲ್ ಖಾನ್-ಸೀಮಾ ಖಾನ್ ದಂಪತಿಯ ಎರಡನೇ ಮಗ ನಿರ್ವಾಣ ಹುಟ್ಟಿದ್ದೂ ಸರೊಗಸಿ ಮೂಲಕವೇ. 2013ರಲ್ಲಿ ಶಾರುಖ್ ಖಾನ್-ಗೌರಿ ಖಾನ್ ದಂಪತಿ ಇದೇ ಪ್ರಕ್ರಿಯೆ ಮೂಲಕ ಅಬ್​ರಾಮ್ ಪಡೆದರು. ತುಷಾರ್ ಕಪೂರ್ ಮದುವೆಯನ್ನೇ ಆಗಿಲ್ಲ. ಆದರೂ ಸರೊಗಸಿ ಮೂಲಕ 2016ರಲ್ಲಿ ಲಕ್ಷ್ಯ ಎಂಬ ಗಂಡು ಮಗುವಿನ ತಂದೆಯಾದರು. ಅವರ ಸಹೋದರಿ ಏಕ್ತಾ ಕಪೂರ್ ಸಹ ಮದುವೆಯಾಗದೇ 2019ರಲ್ಲಿ ಸರೊಗಸಿ ಮೂಲಕ ತಾಯಿಯಾದರು. ಇನ್ನು, ಶ್ರೇಯಸ್ ತಲ್ಪಾಡೆ ಮತ್ತು ದೀಪ್ತಿ, ಸನ್ನಿ ಲಿಯೋನ್ ಮತ್ತು ಡೇನಿಯಲ್, ಲೀಸಾ ರೇ ಮತ್ತು ಜೇಸನ್ ಡೆಹ್ನಿ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ, ಪ್ರೀತಿ ಜಿಂಟಾ ಮತ್ತು ಜೀನ್ ಗುಡೆನಾಫ್, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ದಂಪತಿ ಮಗುವನ್ನು ಪಡೆದಿದ್ದು ಸರೋಗಸಿ ಮೂಲಕವೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net