ಗೆಟ್​ವೆಲ್​ ಸೂನ್: ಎಸ್​.ಪಿ.ಬಿ ಗುಣಮುಖರಾಗಲೆಂದು ಸೆಲೆಬ್ರಿಟಿಗಳ ಪ್ರಾರ್ಥನೆ

S P Balasubramaniam - Final
Published on

ಭಾರತದ ಹೆಮ್ಮೆಯ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಬಹಳ ಕ್ರಿಟಿಕಲ್​ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಹೀಗಿರುವಾಗ, ಅವರು ಸುರಕ್ಷಿತವಾಗಿ ಬೇಗ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಈಗಾಗಲೇ ಅವರ ಅಭಿಮಾನಿಗಳು ಗೆಟ್​ವೆಲ್​ ಸೂನ್​ ಎಸ್​ಪಿಬಿ ಎಂಬ ಅಭಿಯಾನವನ್ನೇ ಶುರು ಮಾಡಿದ್ದಾರೆ. ತಮ್ಮ ಮೆಚ್ಚಿನ ಗಾಯಕ ಬೇಗ ಆರೋಗ್ಯಕರವಾಗಿ ಮನೆಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬರೀ ಅಭಿಮಾನಿಗಳಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಎಸ್​.ಪಿ.ಬಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಈ ಕುರಿತು ಇಳಯರಾದ ಒಂದು ವಿಡಿಯೋ ಮಾಡಿದ್ದಾರೆ. ತಮ್ಮ ಮೆಚ್ಚಿನ ಗಾಯಕ ಬಾಲು ಅವರನ್ನು ಬೇಗ ವಾಪಸ್ಸು ಬಾ ಎಂದು ಕರೆದಿದ್ದಾರೆ. ಇನ್ನು, ಎ.ಆರ್​. ರೆಹಮಾನ್​ ಸಹ ಸೋಷಿಯಲ್​ ಮೀಡಿಯಾ ಮೂಲಕ, ಎಸ್​.ಪಿ.ಬಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಅವರು ಬೇಗ ಮನೆಗೆ ಬರಲಿ ಎಂದು ಪ್ರಾರ್ಥಿಸಿ ಎಂದು ಸಂಗೀತಾಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಬರೀ ಇಳಯರಾಜ ಅಥವಾ ರೆಹಮಾನ್​ ಮಾತ್ರ ಅಲ್ಲ. ಧನುಶ್​, ಸೌಂದರ್ಯ ರಜನಿಕಾಂತ್​, ನಿರ್ದೇಶಕ ಶೇಖರ್ ಕಪೂರ್​, ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​, ನಟ ಪ್ರಸನ್ನ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಎಸ್​.ಪಿ.ಬಿ ಗುಣಮುಖರಾಗಲಿ ಮನೆಗೆ ಮರಳಲಿ ಎಂದು ಹಾರೈಸುವುದರ ಜತೆಗೆ, ಸಂಗೀತಾಭಿಮಾನಿಗಳಿಗೂ ಕರೆ ನೀಡಿದ್ದಾರೆ.

ಆಗಸ್ಟ್​ ಐದರಂದು, ಎಸ್​.ಪಿ.ಬಿ ಅವರನ್ನು ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ಎಂಜಿಎಂ ಹೆಲ್ತ್​ಕೇರ್​ಗೆ ದಾಖಲಿಸಲಾಗಿತ್ತು. ಆ ನಂತರ ಅವರೇ ತಮಗೆ ಕರೊನಾ ಪಾಸಿಟಿವ್​ ಇದೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಹೇಳಿದ್ದರು. ಆದರೆ, ಶುಕ್ರವಾರ ಸಂಜೆ, ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರಿಗೆ ಐಸಿಯೂನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net