

ಕಳೆದ ತಿಂಗಳಷ್ಟೇ ‘ಹಂಗಾಮಾ - 2’ ಎಂಬ ಬಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪ್ರಣೀತಾ ಸುಭಾಶ್, ಇದೀಗ ಎಲ್ಲಾ ಕೆಲಸಗಳನ್ನು ಮುಗಿಸಿ ಮಾಲ್ಡೀವ್ಸ್ಗೆ ಫ್ಲೈಟು ಹತ್ತಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಅಲ್ಲಿನ ಸಮುದ್ರ ತೀರದಲ್ಲಿ ಪ್ರಣೀತಾ ರಜೆ ಕಳೆಯುತ್ತಿದ್ದಾರೆ. ಸಾಮಾನ್ಯವಾಗಿ ನಟ-ನಟಿಯರೆಲ್ಲಾ ವರ್ಷಕ್ಕೊಂದಾವರ್ತಿ ವಿದೇಶಕ್ಕೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಬರುವುದುಂಟು. ಆದರೆ, ಈ ಬಾರಿ ಕರೊನಾದಿಂದಾಗಿ ಯಾರೂ, ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈಗ ಎಲ್ಲವೂ ಸಹಜಸ್ಥಿತಿ ಗೆ ಬರುತ್ತಿರುವಂತೆ ಒಬ್ಬೊಬ್ಬರೇ ಒಂದಿಷ್ಟು ರಜೆ ಪಡೆದು, ವಿಶ್ರಾಂತಿಗೆ ಹೊರಟು ನಿಂತಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಯೂರೋಪ್ ಕಡೆಗೆ ಹೋಗುವುದುಂಟು. ಆದರೆ, ಕರೊನಾ ಅಲ್ಲಿನ್ನೂ ಪೂರ್ತಿಯಾಗಿ ತಗ್ಗಿಲ್ಲವಾದ್ದರಿಂದ, ಮಾಲ್ಡೀವ್ಸ್ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಬರೀ ಪ್ರಣೀತಾ ಅಷ್ಟೇ ಅಲ್ಲ, ಹಲವು ನಟ-ನಟಿಯರು ಕಳೆದ ಕೆಲವು ದಿನಗಳಲ್ಲಿ ಮಾಲ್ಡೀವ್ಸ್ನತ್ತ ಮುಖ ಮಾಡುತ್ತಿದ್ದಾರೆ. ಹೊಸದಾಗಿ ಮದುವೆಯಾಗಿರುವ ಕಾಜಲ್ ಅಗರ್ವಾಲ್, ತಮ್ಮ ಪತಿಯ ಜತೆಗೆ ಅಲ್ಲಿ ಹನಿಮೂನ್ನಲ್ಲಿದ್ದಾರೆ. ಇನ್ನು ಟೈಗರ್ ಶ್ರಾಫ್, ವೇದಿಕಾ ಸಹ ಮಾಲ್ಡೀವ್ಸ್ನಲ್ಲೇ ಇದ್ದಾರೆ. ಕಳೆದ ವಾರವಷ್ಟೇ ಖ್ಯಾತ ಬ್ಯಾಡ್ಮಿಂಟನ್ ತಾರೇ ಸೈನಾ ನೆಹವಾಲ್, ಅಲ್ಲಿ ವಿಶ್ರಾಂತಿಗೆಂದು ಹೋಗಿದ್ದರು. ಇನ್ನು ಕಳೆದ ತಿಂಗಳು ತಾಪ್ಸಿ ಪನ್ನು ತಮ್ಮ ಗೆಳೆತಿಯರ ಜತೆಗೆ ಮಾಲ್ಡೀವ್ಸ್ನ ಕಡಲಕಿನಾರೆಯಲ್ಲಿ ಫೋಟೋ ತೆಗೆಸಿಕೊಂಡು ಬಂದರು.