ಚೀನಾ ಆಪ್​ ವಿರುದ್ಧ ತಾರೆಯರ ಸಮರ; ಸ್ವದೇಶಿ ಪ್ರೇಮ

cini- anita
Published on

ಕೆ.ಬಿ. ಶುಭ ಬೆಂಗಳೂರು

ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಸ್ವದೇಶಿ ವಸ್ತು ಬಳಕೆ ಹಾಗೂ ಚೀನಾದ ಆಪ್​ಗಳನ್ನು ಡಿಲೀಟ್ ಮಾಡುವ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿದ್ದಾರೆ. ಅದರಂತೆ ತಾರೆಯರು ಕೂಡ ನಾವು ಭಾರತದ ಆರ್ಥಿಕತೆ ಮೇಲೆತ್ತಲು ಕೈ ಜೋಡಿಸುತ್ತೇವೆಂದು ಸ್ವದೇಶಿ ವಸ್ತು ಬಳಕೆ ಪ್ರಾರಂಭಿಸಿ ಚೈನೀಸ್ ಆಪ್​ಗಳ ಬಳಕೆ ನಿಲ್ಲಿಸಿದ್ದಾರೆ. ಅಂತಹ ಕೆಲ ತಾರೆಯರು ವಿಜಯವಾಣಿ ಜತೆ ಮಾತನಾಡಿದ್ದಾರೆ.

20 ದಿನ ಉಪಯೋಗಿಸಿದೆ:ನಾನು ಟಿಕ್​ಟಾಕ್ ಬಳಸಲು ಪ್ರಾರಂಭಿಸಿದ್ದೇ ಮೇ 5ರಿಂದ. ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲಿ ಬೇಜಾರಾಗುತ್ತಿದೆ ಎಂದು ಟಿಕ್​ಟಾಕ್ ಡೌನ್​ಲೋಡ್ ಮಾಡಿಕೊಂಡೆ. ಆದರೆ, ಅದನ್ನು ಬಳಸಿದ್ದು 15-20 ದಿನಗಳು ಮಾತ್ರ’ ಎನ್ನುತ್ತಾರೆ ಅನಿತಾ ಭಟ್. ‘ಸೈನಿಕರ ದುರ್ಮರಣದ ನಂತರ ಆಪ್ ಬಳಕೆಯನ್ನು ನಿಷೇಧಿಸಿದ್ದೇನೆ. ಟಿವಿ, ಮೊಬೈಲ್​ನಂತಹ ದುಬಾರಿ ವಸ್ತುಗಳನ್ನು ಹೊರತು ಪಡಿಸಿ ದಿನನಿತ್ಯ ಬಳಕೆಯ ವಸ್ತುಗಳನ್ನು ಆದಷ್ಟು ಸ್ವದೇಶಿ ಬಳಸುತ್ತೇನೆ. ನಾವು ಇಂದು ಕೊಳ್ಳುವ ಒಂದು ಸಣ್ಣ ಸ್ವದೇಶಿ ವಸ್ತು ಸಹ ಭಾರತದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಸಹಕಾರಿ’ ಎನ್ನುತ್ತಾರೆ ಅನಿತಾ ಭಟ್.

ನಾವೇ ಅರ್ಥ ಮಾಡ್ಕೋಬೇಕು: ‘ಬೇರೆಯವರ ಟಿಕ್​ಟಾಕ್ ವೀಡಿಯೋದಲ್ಲಿ ನಾನು ಕಾಣಿಸಿಕೊಂಡಿದ್ದೇನೆಯೇ ಹೊರತು ನಾನು ಯಾವತ್ತೂ ಟಿಕ್​ಟಾಕ್ ಡೌನ್​ಲೋಡ್ ಮಾಡಿಕೊಂಡಿಲ್ಲ. ಚೀನಾ ಆಪ್ ಆದ ಪೇಟಿಎಂ ಬಳಸುತ್ತಿದ್ದೆ. ಈಗ ಅದನ್ನೂ ಡಿಲೀಟ್ ಮಾಡಿ ಜಿ ಪೇ ಬಳಸುತ್ತಿದ್ದೇನೆ’ ಎನ್ನುತ್ತಾರೆ ‘ಮೊಗ್ಗಿನ ಮನಸ್ಸಿ’ನ ಶುಭಾ ಪೂಂಜಾ. ‘ಚೀನಾದವರ ನಡೆ ಕಂಡ ಮೇಲೂ ನಾವು ಚೀನಾ ಉತ್ಪನ್ನ ಅಥವಾ ಚೀನಾ ಆಪ್ಸ್ ಬಳಸುವುದು ಎಷ್ಟರ ಮಟ್ಟಿಗೆ ಸರಿ. ನಾವಾಗಿಯೇ ಅರ್ಥ ಮಾಡಿಕೊಂಡು ಬಳಕೆ ನಿಲ್ಲಿಸಬೇಕು. ಹಾಗಂತ ಒಮ್ಮೆಲೆ ಬಳಕೆ ನಿಲ್ಲಿಸಲು ಸಾಧ್ಯವಿಲ್ಲ. ಕ್ರಮೇಣ ಅಭ್ಯಾಸ ಮಾಡಿಕೊಳ್ಳೋಣ. ನಾವು ಬೇರೆ ದೇಶದ ಉತ್ಪನ್ನ ಬಳಕೆ ಕಡಿಮೆ ಮಾಡಿದಾಗ ಮಾತ್ರ ದೇಶದಲ್ಲಿ ಆ ಉತ್ಪನ್ನಗಳ ತಯಾರಿಕೆಗೆ ಮುಂದಾಗಲು ಸಾಧ್ಯ. ಆಗ ದೇಶದ ಆರ್ಥಿಕ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶವೂ ದೊರೆಯುತ್ತದೆ. ಜನ ತಾವಾಗಿಯೇ ಆಪ್ ಅನ್​ಇನ್​ಸ್ಟಾಲ್ ಮಾಡದಿದ್ದರೆ ಸರ್ಕಾರವೇ ಅದನ್ನು ಬ್ಯಾನ್ ಮಾಡಲಿ’ ಎನ್ನುತ್ತಾರೆ ಶುಭಾ.

ಸರ್ಕಾರ ಕ್ರಮ ತೆಗೆದುಕೊಳ್ಳಲಿ:‘ವಿಶ್ವವೇ ಕರೊನಾ ಸಂಕಷ್ಟದಲ್ಲಿರುವಾಗ ಚೀನಾ ಈ ರೀತಿ ಆಕ್ರಮಣ ಮಾಡಿದ್ದು ಸರಿ ಅಲ್ಲ. ಅವರಿಗೆ ಮನುಷ್ಯತ್ವವೇ ಇಲ್ಲ ಎನ್ನಿಸುತ್ತದೆ. ಚೀನಾ ಆಪ್ ಆದ ಕ್ಯಾಮ್ ಸ್ಕಾನರ್ ಮತ್ತು ಟಿಕ್​ಟಾಕ್ ಎರಡನ್ನೂ ಡಿಲೀಟ್ ಮಾಡಿದ್ದೇನೆ’ ಎನ್ನುತ್ತಾರೆ ಸೋನು ಗೌಡ. ‘ಕೇವಲ ನಾನೊಬ್ಬಳು ಮಾಡುವುದಕ್ಕಿಂತ ಇಡೀ ದೇಶದಲ್ಲಿ ಈ ಕೆಲಸ ಆಗಬೇಕಿದೆ. ಅದಕ್ಕೆ ಸರ್ಕಾರ ಮುಂದಾಗಬೇಕು. ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಚೀನಾ ವಸ್ತುಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯು ಅವನ ಸಾಮರ್ಥ್ಯಕ್ಕೆ ತಕ್ಕಂತೆ ಚೀನಾದ ಕಡಿಮೆ ಬೆಲೆಯ ಮೊಬೈಲ್ ಅನ್ನೇ ಖರೀದಿಸಲು ಮುಂದಾಗುತ್ತಾನೆ. ಆದ್ದರಿಂದ ದೇಶದಲ್ಲೇ ಕಡಿಮೆ ಬೆಲೆ ಮೊಬೈಲ್ ತಯಾರಿಸಲಿ. ಈಗ ಎಮೋಷನ್​ಗೆ ಒಳಗಾಗಿ ಚೀನಾ ಆಪ್​ಗಳನ್ನು ಡಿಲೀಟ್ ಮಾಡುತ್ತೇವೆ. ಆದರೆ, ದಿನ ಬಳಕೆಯ ವಸ್ತುಗಳಲ್ಲಿ ಸಂಪೂರ್ಣವಾಗಿ ಸ್ವದೇಶಿ ಬಳಸಲು ಸಾಧ್ಯವೇ? ಎಂಬುದನ್ನು ಮನಗಂಡು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಸೋನು ಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net