

ಮುಂಬೈ/ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಸಂಬಂಧ ರಿಯಾ ಚಕ್ರವರ್ತಿ ವಿರುದ್ಧದ ದೂರಿನ ತನಿಖೆಯನ್ನು ಬಿಹಾರದ ಸರ್ಕಾರ ಸಿಬಿಐಗೆ ವಹಿಸಿದೆ. ಆದರೆ, ಆತ್ಮಹತ್ಯೆ ಕುರಿತಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಮತ್ತು ಬಿಹಾರ ಸರ್ಕಾರಗಳ ಮಧ್ಯೆ ಜಟಾಪಟಿ ಉಂಟಾಗಿದೆ.
ಸುಶಾಂತ್ ಕುಟುಂಬಸ್ಥರ ಒತ್ತಾಯದಂತೆ ಪ್ರಕರಣವನ್ನು ಸಿಬಿಐಗೆ ಶಿಫಾರಸು ಮಾಡಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಈ ಕ್ರಮಕ್ಕೆ ಟೀಕೆಗಳು ವ್ಯಕ್ತವಾಗಿವೆ. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ನಿತೀಶ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಲಾಗಿದೆ. ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಮಾಡಿರುವ ಶಿಫಾರಸಿಗೆ ಕಾನೂನು ಮಾನ್ಯತೆ ಇಲ್ಲ ಎಂದು ರಿಯಾ ಚಕ್ರವರ್ತಿ ಪರ ವಕೀಲ ಹೇಳಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಿಬಿಐ ತನಿಖೆ ಪ್ರಸ್ತಾವನೆಯನ್ನು ತಳ್ಳಿ ಹಾಕಿದ್ದಾರೆ.
ಹಣಕಾಸು ವ್ಯವಹಾರ ತನಿಖೆಗೆ ಅಡಿಟರ್: ಸುಶಾಂತ್ ಖಾತೆಯಿಂದ ಸುಮಾರು -ಠಿ; 15 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ಸುಶಾಂತ್ ಕುಟುಂಬ ಆರೋಪಿಸಿರುವ ಹಿನ್ನೆಲೆಯಲ್ಲಿ ನಟನ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂಬೈ ಪೊಲೀಸರು ಅಡಿಟರ್ ನೇಮಕ ಮಾಡಿದ್ದಾರೆ. ಸುಶಾಂತ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುತ್ತಿದೆ.
ಒಂದೇ ಪ್ರಕರಣವನ್ನು ಎರಡು ತಂಡ ತನಿಖೆ ನಡೆಸಬಹುದೇ?: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹಾಗೂ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಬಿಹಾರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಪ್ರಕರಣವನ್ನು ವಹಿಸಿದೆ. ಒಂದೇ ಪ್ರಕರಣದ ಕುರಿತು ಎರಡು ಸಂಸ್ಥೆಗಳು ತನಿಖೆ ನಡೆಸಬಹುದೆ ಎಂಬ ಕಾನೂನು ಜಿಜ್ಞಾಸೆ ಎದುರಾಗಿದೆ.
ಮುಂಬೈನಲ್ಲಿ ಘಟನೆ ನಡೆದಿದ್ದು, ಸಂತ್ರಸ್ತರ ಕುಟುಂಬ ಬಿಹಾರದಲ್ಲಿರುವ ಕಾರಣ ಸ್ಥಳೀಯ ಠಾಣೆಗೆ ದೂರು ನೀಡಿದೆ. ಕಾನೂನಿನ ಪ್ರಕಾರ ಈ ಕುರಿತ ಎಫ್ಐಆರ್ ಅನ್ನು ಘಟನೆ ನಡೆದ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಆದರೆ, ಬಿಹಾರ ಪೊಲೀಸರು ಪ್ರಕರಣವನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸಿಲ್ಲ. ಸ್ವತಃ ತನಿಖೆ ನಡೆಸುತ್ತಿದ್ದಾರೆ. ತನಿಗೆಗಾಗಿ ಮುಂಬೈಗೆ ಬಂದ ಬಿಹಾರದ ಎಸ್ಪಿಯನ್ನು ಒತ್ತಾಯ ಪೂರ್ವಕವಾಗಿ ಕ್ವಾರಂಟೈನ್ಗೆ ಒಳಪಡಿಸಿರುವುದರಿಂದಲೂ ಉಭಯ ಸರ್ಕಾರಗಳ ಮಧ್ಯೆ ಕಿತ್ತಾಟ ಶುರುವಾಗಿದೆ.