

ಮುಂಬೈ: ಬಾಲಿವುಡ್ ಬಿಚ್ಚಮ್ಮ ಉರ್ಫಿ ಜಾವೇದ್ರನ್ನು ಪೊಲೀಸರು ಬಂಧಿಸಿ ಜೀಪ್ನಲ್ಲಿ ಕರೆದೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನಿನ್ನೆ (ನ.03) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಅಸಲಿ ಬಂಧನವೋ? ಅಥವಾ ನಕಲಿ ಬಂಧನವೋ? ಎಂದು ನೆಟ್ಟಿಗರು ವ್ಯಕ್ತಪಡಿಸಿದ್ದ ಅನುಮಾನಕ್ಕೆ ಇದೀಗ ಉತ್ತರ ಸಿಕ್ಕಿದೆ. ನಕಲಿ ಬಂಧನದ ಹೈಡ್ರಾಮ ಮಾಡಲು ಹೋಗಿ, ಇದೀಗ ನಿಜವಾಗಿಯೂ ಬಂಧನವಾಗುವ ಭೀತಿ ಎದುರಿಸುತ್ತಿದ್ದಾರೆ.
ವೈರಲ್ ಆಗಿದ್ದ ವಿಡಿಯೋದಲ್ಲಿ ಏನಿತ್ತು?
ವಿಡಿಯೋವನ್ನು ವೈರಲ್ ಭಯಾನಿ ಹೆಸರಿನ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಕಾಫಿ ಶಾಪ್ನಿಂದ ಹೊರಗಡೆ ಬರುವ ಉರ್ಫಿಯನ್ನು ಪೊಲೀಸರು ಎಂದು ಹೇಳಲಾದ ಗುಂಪೊಂದು ತಮ್ಮ ವಶಕ್ಕೆ ಪಡೆಯುತ್ತದೆ. ಗುಂಪಿನಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರು ತಮ್ಮೊಂದಿಗೆ ಠಾಣೆಗೆ ಬರುವಂತೆ ಉರ್ಫಿಗೆ ಹೇಳುತ್ತಾರೆ. ನನ್ನನ್ನು ನಿಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಕಾರಣವೇನು ಎಂದು ಉರ್ಫಿ ಮರು ಪ್ರಶ್ನೆ ಮಾಡಿದಾಗ, ಇಷ್ಟು ಚಿಕ್ಕ ಬಟ್ಟೆ ಹಾಕಿಕೊಂಡು ಯಾರು ಓಡಾಡುತ್ತಾರೆ? ಎಂದು ಮಹಿಳಾ ಪೊಲೀಸ್ ಪ್ರತಿಕ್ರಿಯಿಸಿ, ಜೀಪಿನಲ್ಲಿ ಕರೆದೊಯ್ಯುತ್ತಾರೆ.
ಡಿಸಿಪಿ ಸ್ಪಷ್ಟನೆ
ಉರ್ಫಿ ಜಾವೇದ್ ಬಂಧನದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಂಬೈ ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ್, ಯಾವುದೇ ಬಂಧನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನಕಲಿ ಬಂಧನದ ವಿಡಿಯೋ ಪ್ರಚಾರದ ಗಿಮಿಕ್ ಆಗಿದ್ದು, ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಪ್ರಕರಣ ದಾಖಲು
ಇದೀಗ ಉರ್ಫಿಗೆ ನಿಜವಾಗಿಯೂ ಬಂಧನ ಭೀತಿ ಶುರುವಾಗಿದೆ. ಆಕೆಯ ವಿರುದ್ಧ ಮತ್ತು ವಿಡಿಯೋದಲ್ಲಿ ಪೊಲೀಸ್ ವೇಷ ಧರಿಸಿದ್ದ ಮುಂಬೈನ ಒಶಿವರಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 171, 419, 500 ಮತ್ತು 34 ಸೆಕ್ಷನ್ಗಳ ಅಡಿಯಲ್ಲಿ ಉರ್ಫಿ ವಿರುದ್ಧ ಕೇಸು ದಾಖಲಾಗಿದೆ. ಈ ಸೆಕ್ಷನ್ಗಳು ವಂಚನೆಯ ಉದ್ದೇಶದಿಂದ ಸಾರ್ವಜನಿಕ ಸೇವಕ ಬಳಸುವ ವಸ್ತ್ರವನ್ನು ಧರಿಸುವುದು (171), ಪರರ ವೇಷಧರಿಸಿ ವಂಚನೆ (419), ಮಾನಹಾನಿ (500) ಮತ್ತು ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯ (34) ವನ್ನು ಸೂಚಿಸುತ್ತವೆ.
ಅಂದಹಾಗೆ ಉರ್ಫಿ, ಕಾನೂನು ತೊಂದರೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2022ರ ಡಿಸೆಂಬರ್ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರ ಮತ್ತು ಅಶ್ಲೀಲ ಕೃತ್ಯಗಳಿಗಾಗಿ ಆಕೆಯ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಉರ್ಫಿ, ಅಕ್ರಮ ಮತ್ತು ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ದೂರು ಸಲ್ಲಿಸಿದ್ದರು.
ಉರ್ಫಿ ಬಗ್ಗೆ ಹೇಳುವುದಾದರೆ, ಬಿಗ್ ಬಾಸ್ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಉರ್ಫಿ ಜಾವೇದ್, ಯಾವುದಕ್ಕೂ ಕೇರ್ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಹಾಟ್ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್)