ಕಾಂತಾರ ಮೂಲಕ ಕನ್ನಡಕ್ಕೆ ಬಂದ ಕೆನಡಾ ಗಾಯಕ :‘ಬ್ರಹ್ಮಕಲಶ’ ಹಾಡಿಗೆ ಧ್ವನಿಯಾದ ಅಭಿಷೇಕ್ ವೆಂಕಟ್

abbhi v
Published on

ಬೆಂಗಳೂರು: ವಿಶ್ವಾದ್ಯಂತ ಕಳೆದ ಅ.2ರಂದು ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಅಧ್ಯಾಯ 1’ ಚಿತ್ರವು ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ. ಚಿತ್ರದ ಮೇಕಿಂಗ್, ವಿಎಫ್ಎ​ಕ್ಸ್ ಗ್ರಾಫಿಕ್ಸ್, ಸಂಗೀತ, ಹಿನ್ನೆಲೆ ಸಂಗೀತಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಸಿನಿಮಾದ ‘ಬ್ರಹ್ಮಕಲಶ’ ಹಾಡಿಗೆ ಜನ ತಲೆದೂಗಿದ್ದಾರೆ. ಈ ಹಾಡಿಗೆ ಧ್ವನಿಯಾದವರು ಕೆನಡಾ ಮೂಲದ ಗಾಯಕ ಎನ್ನುವುದು ವಿಶೇಷ. ಹೌದು ಕೆನಡಾ ಮೂಲದ ಗಾಯಕ ಅಭಿಷೇಕ್ ವೆಂಕಟ್ ‘ಬ್ರಹ್ಮಕಲಶ’ ಹಾಡಿಗೆ ಧ್ವನಿಯಾಗಿದ್ದಾರೆ. ಈ ಮೂಲಕ ಅವರು ಕನ್ನಡ ಸಿನಿಮಾರಂಗಕ್ಕೆ ಪರಿಚಯರಾಗುತ್ತಿದ್ದಾರೆ. ಈ ಹಾಡಿಗೆ ಶಶಿರಾಜ್ ಕಾವೂರ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು ಮಲಯಾಳಂ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಲ್ಲಿ ಅಭಿಷೇಕ್ ಹಾಡಿದ್ದಾರೆ.

ಅಭಿಷೇಕ್ ವೆಂಕಟ್ ಯಾರು?: ಅಭಿಷೇಕ್ ವೆಂಕಟ್ ಅಲಿಯಾಸ್ ಅಬ್ಬಿ ಎಂದೇ ಪ್ರಸಿದ್ಧಿಯಾಗಿರುವ ಈ ಗಾಯಕ ಈ ಹಿಂದೆ ಗ್ರಾೃಮಿ ವಿಜೇತ ರಿಕ್ಕಿ ಕೇಜ್ ಸಹಯೋಗದಲ್ಲಿ ‘ಆರಂಭ್’ ಎಂಬ ಅಲ್ಬಂ ಸಾಂಗ್ ಬಿಡುಗಡೆ ಮಾಡಿದ್ದರು. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಚಿತ್ರದ ಹಾಡಿಗೆ ಧ್ವನಿಯಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 2019ರಲ್ಲಿ ಭಾರತಕ್ಕೆ ಬಂದಿದ್ದ ಅಭಿ ಇಲ್ಲಿನ ಸಂಗೀತ, ರಾಗಗಳಿಗೆ ಮನಸೋತು ಕೆನಡಾಕ್ಕೆ ತೆರಳಿ, ಶಾಸ್ತ್ರೀಯ ಸಂಗೀತದ 73 ರಾಗಗಳನ್ನು 13 ನಿಮಿಷಗಳಲ್ಲಿ ಹಾಡಿ ಪರಿಚಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net