

ಸಿನಿಮಾ ಮಾಡಬೇಕು ಅಂತ ಹೊಸ ತಂಡಗಳು ಹೊಸ ಹುಮ್ಮಸ್ಸಿನಿಂದ ಚಿತ್ರರಂಗಕ್ಕೆ ಬರುತ್ತವೆ. ಕೆಲವರು ಸಕ್ಸಸ್ ಆಗುತ್ತಾರೆ, ಕೆಲವರು ಅರ್ಧಕ್ಕೆ ಕೈಸುಟ್ಟುಕೊಂಡು ಸುಮ್ಮನಾಗಿಬಿಡುತ್ತಾರೆ. ಮುಹೂರ್ತಕ್ಕೇ ಸುಸ್ತಾಗಿ ವಾಪಸ್ ಹೋದವರಿಗೂ ಕಡಿಮೆ ಇಲ್ಲ. ಹೀಗಿರುವಾಗ ೨೦೧೭ರಲ್ಲೇ ಚಿತ್ರೀಕರಣ ಪ್ರಾರಂಭಿಸಿ, ೨೦೧೯ರಲ್ಲಿ ಶೂಟಿಂಗ್ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಬೇಕು ಎನ್ನುವಷ್ಟರಲ್ಲಿ ಕೊರೋನಾ ಸಂಕಷ್ಟ ಎದುರಾದ ಕಾರಣ ಅಲ್ಲಿಗೇ ಸ್ಥಗಿತಗೊಂಡಿತ್ತು. ಆದರೆ ಎದೆಗುಂದದ ಚಿತ್ರತಂಡ ಈಗ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡು ನಾಳೆ ತೆರೆಗೆ ಬರಲು ರೆಡಿಯಾಗಿದೆ.
ಹೌದು, ಶ್ರೀನಿವಾಸ್ ಎಸ್‌ಬಿ ನಿರ್ದೇಶನದ `ಬೈಪಾಸ್ ರೋಡ್' ನಾಳೆ ಜುಲೈ ೨೯ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಕೆಲವು ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ಆಯೋಜಿಸಿದ್ದ ಚಿತ್ರತಂಡದ ಕೆಲವರು, ಹಲವು ಕಲಾವಿದರು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಎಂ.ಬಿ. ಪ್ರೊಡಕ್ಷನ್ಸ್ ಅಡಿಲ್ಲಿ ಭರತ್ ರಾಜ್ ಮತ್ತು ಮಹೇಶ್ ಜತೆಗೂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಭರತ್ ಕುಮಾರ್, ಚಿಕ್ಕಣ್ಣ, ತಿಲಕ್, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್, ಮಾಸ್ಟರ್ ಆನಂದ್, ತಬಲ ನಾಣಿ, ಉಗ್ರಂ ಮಂಜು, ಕುರಿಬಾಂಡ್ ರಂಗ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿದೆ.