

ಬೆಂಗಳೂರು: ‘ಜೇಮ್ಸ್’ ಬಳಿಕ ನಿರ್ದೇಶಕ ಚೇತನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಬರ್ಮ’. ಇತ್ತಿಚೆಗಷ್ಟೆ ಚಿತ್ರದ ಮುಹೂರ್ತ ದೊಡ್ಡಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಲಕ ತೋರಿದ್ದು, ರಾಘವೇಂದ್ರ ರಾಜಕುಮಾರ್ ಕ್ಯಾಮರಾ ಚಾಲನೆ ಮಾಡಿದರು. ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳಿದರು.
ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಎ.ಪಿ. ಅರ್ಜುನ್, ನಟ ಧಿರೇನ್ ರಾಜಕುಮಾರ್ ಚಿತ್ರತಂಡಕ್ಕೆ ಶುಭಕೋರಿದರು. ಐದನೇ ಚಿತ್ರವನ್ನು ನಿರ್ದೇಶಿಸುತ್ತಿರುವ ಚೇತನ್, ‘‘ಬರ್ಮ’ ಎಂದರೆ ಬ್ರಹ್ಮ ವಾಸಿಸುವ ಜಾಗ ಹಾಗೂ ಒಂದು ದೇಶದ ಹೆಸರು. ಈ ಹೆಸರು ಚಿತ್ರಕ್ಕೆ ಪೂರಕವಾಗಿರುವುದರಿಂದ ಶೀರ್ಷಿಕೆಯಾಗಿ ಇಟ್ಟಿದ್ದೇವೆ. ಇದೊಂದು ಆ್ಯಕ್ಷನ್-ಎಂಟರ್‌ಟೇನರ್ ಚಿತ್ರವಾಗಿದ್ದು, ಅ.3ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಆದಿತ್ಯ ಮೆನನ್ ಸೇರಿ ಬೇರೆ ಭಾಷೆಗಳ ಕಲಾವಿದರೂ ಭಾಗಿಯಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು. ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ರಕ್ಷ್, ‘ಬಹಳ ವರ್ಷಗಳಿಂದ ನನ್ನ ಜತೆ ಸಿನಿಮಾ ಮಾಡಲು ಚೇತನ್ ಅವರಿಗೆ ಕೇಳುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ’ ಎಂದು ಹೇಳಿಕೊಂಡರು.
ಇನ್ನು ಈ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಆಲೋಚನೆಯಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನವಿರಲಿದೆ.