

ಬೆಂಗಳೂರು: ಅನೀಶ್ ತೇಜೇಶ್ವರ್ ಅಭಿನಯದ 'ಬೆಂಕಿ' ಚಿತ್ರದ ಬಗ್ಗೆ ಕೇಳಿರಬಹುದು. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಈ ಚಿತ್ರದ 'ಓಕೆ ನಾ...' ಎಂಬ ಹಾಡು ಬಿಡುಗಡೆಯಾಗಿದ್ದು, ಈ ಹಾಡಿಗೆ ರೀಲ್ಸ್ ಮಾಡಿದವರಿಗೆ ಚಿತ್ರತಂಡ ಒಂದು ಭರ್ಜರಿ ಉಡುಗೊರೆ ಕೊಡುವುದಕ್ಕೆ ತೀರ್ಮಾನಿಸಿದೆ.
'ಓಕೆ ನಾ ...' ಹಾಡಿನಲ್ಲಿ ಅನೀಶ್ ತೇಜೇಶ್ವರ್ ಮತ್ತು ಸಂಪದ ಹುಲಿವಾನ ಕಾಣಿಸಿಕೊಂಡಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ರಚಿಸಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ ರಚಿಸಿರುವ ಈ ಹಾಡಿಗೆ ಐಶ್ವರ್ಯಾ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಕಲರ್ಫುಲ್ ಆಗಿ ಮೂಡಿಬಂದಿರುವ ಈ ಹಾಡಿಗೆ ಅತ್ಯುತ್ತಮವಾಗಿ ರೀಲ್ಸ್ ಮಾಡಿದವರಿಗೆ "ಬೆಂಕಿ' ಸಿನಿಮಾ ಬಳಗ ಐಫೋನ್- 13 ಬಹುಮಾನ ನೀಡುವುದಾಗಿ ಘೋಷಿಸಿದೆ.
ರೀಲ್ಸ್ ಮಾಡಿದವರು ಸೋಷಿಯಲ್ ಮೀಡಿಯಾದಲ್ಲಿ ಅನೀಶ್ ತೇಜೇಶ್ವರ್ಗೆ ಟ್ಯಾಗ್ ಮಾಡಬೇಕು. ಅತ್ಯುತ್ತಮವಾದ ರೀಲ್ಸ್ಗೆ ಬಹುಮಾನ ಸಿಗಲಿದೆ. 'ಬೆಂಕಿ', ಅನೀಶ್ ತೇಜೇಶ್ವರ್ ಅಭಿನಯದ 10ನೇ ಚಿತ್ರವಾಗಿದ್ದು, ಇದನ್ನು ಅವರೇ ನಿರ್ಮಿಸಿದ್ದು, ಶಾನ್ ನಿರ್ದೇಶನ ಮಾಡಿದ್ದಾರೆ.