

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ಕಿಚ್ಚ ಸುದೀಪ್ ಸೋಮವಾರ 51ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರತಿವರ್ಷ ಮನೆಯ ಬಳಿ ಜನಜಂಗುಳಿಯಾಗಿ ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದ ಕಾರಣ, ಈ ಬಾರಿ ಮನೆಯ ಬಳಿ ರ್ಬತ್ಡೇ ಆಚರಿಸದೇ ಕಿಚ್ಚ ಸುದೀಪ್ ಎಂಇಎಸ್ ಕಾಲೇಜು ಮೈದಾನದಲ್ಲಿ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುದೀಪ್, "ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾವು ಹೋದಲ್ಲೆಲ್ಲ ತಲೆ ಎತ್ತಿಕೊಂಡು ಓಡಾಡಲು ಕಾರಣ ಅಭಿಮಾನಿಗಳು. ನಾನು ಗಳಿಸಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ಅಭಿಮಾನಿಗಳು ಯಾವತ್ತೂ ಮಾಡಿಲ್ಲ. ಹೀಗೆ ನಾನು ಪದೇ ಪದೆ ಹೇಳಲು ಕಾರಣ, ಸಿನಿಮಾ ಎಲ್ಲರೂ ಮಾಡುತ್ತೇವೆ. ಆದರೆ, ವ್ಯಕ್ತಿತ್ವದಲ್ಲಿ ದೊಡ್ಡವರಾಗಲು ಸಿನಿಮಾ ಮಾತ್ರ ಸಾಕಾಗುವುದಿಲ್ಲ. ನಮ್ಮ ಕುಟುಂಬ, ಸುತ್ತಮುತ್ತಲಿನ ಸ್ನೇಹಿತರು, ತಪ್ಪಿದಾಗ ತಿದ್ದುವ ಮಾಧ್ಯಮಗಳು ಎಲ್ಲರೂ ನನ್ನ ಜತೆ ಚೆನ್ನಾಗಿದ್ದಾರೆ. ಅದಕ್ಕೇ ನಾನೂ ಚೆನ್ನಾಗಿದ್ದೇನೆ. ನೀವು ಎಲ್ಲಿಯವರೆಗೆ ನನ್ನನ್ನು ನೋಡಲು ಇಷ್ಟಪಡುತ್ತೀರೋ, ಅಲ್ಲಿಯವರೆಗೂ ನಟಿಸುತ್ತೇನೆ. ನನ್ನ ಅಭಿಮಾನಿಗಳಲ್ಲಿ ಒಳ್ಳೇತನವಿದೆ. ಅದಕ್ಕೇ ನಾನಿಷ್ಟು ಒಳ್ಳೆಯವನು' ಎಂದರು.
"ಮ್ಯಾಕ್ಸಿಮಮ್ ಮಾಸ್' ಸಾಂಗ್:
ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ "ಮ್ಯಾಕ್ಸ್' ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡಲಾಗಿದೆ. "ಮ್ಯಾಕ್ಸೇ ಮ್ಯಾಕ್ಸಿಮಮ್ ಮಾಸ್' ಎಂದು ಸಾಗುವ ಹೀರೋ ಇಂಟ್ರೋ ಸಾಂಗ್ ಇದಾಗಿದ್ದು, ಈಗಾಗಲೇ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ಅಜನೀಷ್ ಲೋಕನಾಥ್ ಸಂಗೀತ, ಅನೂಪ್ ಭಂಡಾರಿ ಸಾಹಿತ್ಯ, ಚೇತನ್ ಗಂಧರ್ವ ಮತ್ತು ಎಂಸಿ ಬಿಜ್ಜು ಧ್ವನಿಯಲ್ಲಿ ಮೂಡಿಬಂದಿದೆ. ವಿಜಯ್ ಕಾರ್ತಿಕೇಯ ಆ್ಯಕ್ಷನ್&ಕಟ್ ಹೇಳುತ್ತಿರುವ ಈ ಚಿತ್ರವನ್ನು "ತುಪಾಕಿ', "ಕಬಾಲಿ', "ಅಸುರನ್', "ಕರ್ಣನ್' ಸೇರಿ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಕಲೈಪುಲಿ ತನು ವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದು, ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಕೂಡ ಕೈಜೋಡಿಸಿದೆ. ಕಿಚ್ಚ ಸುದೀಪ್ ಜತೆ ವರಲಕ್ಷಿ$್ಮ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ.
ಫಸ್ಟ್ ಲುಕ್ನಲ್ಲಿ "ಬಿಲ್ಲ ರಂಗ ಬಾಷಾ'
ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಸೋಮವಾರ "ಬಿಲ್ಲ ರಂಗ ಬಾಷಾ' ಚಿತ್ರದ ಟೈಟಲ್ ಮತ್ತು ಕಾನ್ಸೆಪ್ಟ್ ವಿಡಿಯೋ ಝಲಕ್ ಬಿಡುಗಡೆ ಮಾಡಲಾಗಿದೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್, ತಾಜ್ಮಹಲ್ ಕೂಡ ಈ ಝಲಕ್ನಲ್ಲಿರುವುದು ವಿಶೇಷ. ಇದು 185 ವರ್ಷಗಳ ಮುಂದೆ ಅರ್ಥಾತ್ 2209ರ ಕಥೆಯಾಗಿದ್ದು, ಅದನ್ನೂ ಸಹ "ಒಂದಾನೊಂದು ಕಾಲದಲ್ಲಿ' ಎಂದು ಶುರು ಮಾಡಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. "ಬಿಲ್ಲ ರಂಗ ಬಾಷಾ' ಚಿತ್ರವನ್ನು ತೆಲುಗಿನ "ಹನುಮಾನ್' ಖ್ಯಾತಿಯ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿದ್ದಾರೆ. "ವಿಕ್ರಾಂತ್ ರೋಣ' ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಸುದೀಪ್ ಜತೆ ಕೈಜೋಡಿಸಿದ್ದಾರೆ. ಚಿತ್ರದ ಬಗ್ಗೆ ಅವರು, "ಸುದೀಪ್ ಸರ್ ಜತೆ ಕೆಲಸ ಮಾಡುವುದು ಅದ್ಭುತ ಅನುಭವ. "ವಿಕ್ರಾಂತ್ ರೋಣ' ಚಿತ್ರವನ್ನು ಜನ ಇಷ್ಟಪಟ್ಟಿದ್ದಾರೆ. ಸುದೀಪ್ ಅವರೇ "ಬಿಲ್ಲ ರಂಗ ಬಾಷಾ'ವನ್ನು ತಮ್ಮ ಕರಿಯರ್ನ ದೊಡ್ಡ ಸಿನಿಮಾಗಳಲ್ಲೊಂದು ಅಂತ ಹೇಳಿರುವುದು ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ' ಎನ್ನುತ್ತಾರೆ.