BRAT MOVIE REVIEW: ಜೂಜಿನ ಲೋಕದಲ್ಲಿ ‘ಕೃಷ್ಣ’ನ ಮೋಜಿನಾಟ

brat
Published on

ಚಿತ್ರ: ಬ್ರ್ಯಾಟ್

ನಿರ್ದೇಶನ: ಶಶಾಂಕ್

ನಿರ್ಮಾಣ: ಮಂಜುನಾಥ್ ಕಂದಕೂರ್

ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಷಾ ಕಂದಕೂರು, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಡ್ರಾೃಗನ್ ಮಂಜು, ರಮೇಶ್ ಇಂದಿರಾ ಮತ್ತಿತರರು

ಶಿವ ಸ್ಥಾವರಮಠ

‘ಸಂಪಾದನೆಯಲ್ಲಿ ಬೆವರಿನ ವಾಸನೆ ಇರಬೇಕು’ ಎಂದು ಇಸ್ಪೀಟ್ ಆಡುತ್ತಾ ಸಿಕ್ಕಿಬಿದ್ದ ಮಗ ಕೃಷ್ಣನಿಗೆ ಪೊಲೀಸ್ ಕಾನ್‌ಸ್ಟೇಬಲ್ ಮಹಾದೇವಯ್ಯ (ಅಚ್ಯುತ್) ಬುದ್ಧಿ ಹೇಳುತ್ತಾರೆ. ಬಳಿಕ ಅಜ್ಜಿಯ ಹೇಳಿದಂತೆ ದುಡಿದು ತಿನ್ನೋಣ ಎಂದು ಫುಡ್ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾನೆ ಕೃಷ್ಣ. ಆದರೆ, ಆತನಿಗೆ ದುಡ್ಡಿದ್ದರೆ ಎಲ್ಲ ಎಂಬ ಸಾಕ್ಷಾತ್ಕಾರವಾಗುತ್ತದೆ. ಬೆವರಿನ ವಾಸನೆಗೆ ಬೊಗಳುವ ನಾಯಿ, ಅರ್ಧಕ್ಕೆ ಬಿಟ್ಟು ಹೋಗುವ ಕ್ರಶ್ ಹಾಗೂ ಪೊಲೀಸ್ ಸ್ಟೇಷನ್‌ನಲ್ಲಿ ಆಗುವ ಅವಮಾನಗಳು ಆತನನ್ನು ‘ಅಡ್ಡದಾರಿ’ಗೆ ಎಳೆಯುತ್ತವೆ. ಆಗಲೇ ಆತ ಅಪ್ಪನ ‘ನೀತಿ’ ಬಿಟ್ಟು ಜೂಜಿನ ಮೋಜಿಗೊಳಗಾಗುತ್ತಾನೆ. ಕೈಯಲ್ಲಿ ದುಡ್ಡು ಆಡುತ್ತದೆ. ಕೊನೆಗೆ ‘ಆರ್ಥಿಕ ಸಲಹೆಗಾರ’ ಎಂದು ಹಣೆಪಟ್ಟಿ ಕಟ್ಟಿಕೊಂಡು ಕಚೇರಿ ಆರಂಭಿಸಿ, ತಾಯಿಯಿಂದ 3 ಲಕ್ಷ ಹಾಗೂ ಪ್ರೇಯಸಿ ಮನಿಷಾರಿಂದ 10 ಲಕ್ಷ ಹಾಗೂ ಸ್ನೇಹಿತರಿಂದ 15 ಲಕ್ಷ ತೆಗೆದುಕೊಂಡು ಹಣ ಡಬಲ್ ಮಾಡುವ ಆಸೆ ತೋರಿಸುತ್ತಾನೆ. ಆಗಲೇ ಆತ ಹೊಸ ಪೀಕಲಾಟಕ್ಕೆ ಸಿಕ್ಕಿಬೀಳುತ್ತಾನೆ. ಇದೇ ಸಮಯದಲ್ಲಿ ಆತನಿಗೆ ಕಷ್ಟ ಎದುರಾಗುತ್ತದೆ. ಸ್ನೇಹಿತನನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ, ಕೃಷ್ಣ ಮುಂದೇನು ಮಾಡುತ್ತಾನೆ ಎಂಬುದರ ಉಪಾಯಕಾರಿ ಕಥೆಯೇ ‘ಬ್ರ್ಯಾಟ್’.

ನಿರ್ದೇಶಕ ಶಶಾಂಕ್ ಯುವ ಜನರಿಗೆ ಹತ್ತಿರವಾಗುವ ಜತೆಗೆ ತಳುಕು-ಬಳುಕಿನ ಕಥೆ ಹೇಳುವುದರಲ್ಲಿ ನಿಸ್ಸೀಮರು. ಈ ಹಿಂದೆ ‘ಸಿಕ್ಸರ್’, ‘ಮೊಗ್ಗಿನ ಮನಸು’, ‘ಕೃಷ್ಣ-ಲೀಲಾ’, ‘ಲವ್ 360’ ಸಿನಿಮಾಗಳಲ್ಲಿ ಅದನ್ನು ಸಾಬೀತುಪಡಿಸಿದ್ದರು. ಅಂತೆಯೇ, ‘ಬ್ರ್ಯಾಟ್’ನಲ್ಲಿ ಕೂಡ ಕ್ರಿಕೆಟ್ ಬೆಟ್ಟಿಂಗ್ ಎಳೆಯನ್ನು ಇಟ್ಟುಕೊಂಡಿದ್ದಾರೆ. ಹಾಗಂತ, ಇದು ಬೆಟ್ಟಿಂಗ್ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕಥೆ ಏನೆಲ್ಲ. ಬದಲಾಗಿ, ಜೂಜು-ಮೋಜಿನ ಸುತ್ತ ಸುತ್ತುವ ಮನರಂಜನಾತ್ಮಕ ಕಥೆ. ಮೊದಲರ್ಧ ಜೂಜಿನ ಬಗ್ಗೆ ಇದ್ದರೆ, ದ್ವಿತೀಯಾರ್ಧ ಮೋಜಿನ ಹಾಗೂ ನಾಯಕನ ಚಾಣಾಕ್ಷತನದ ಕಥೆಯಿದೆ. ಇಲ್ಲಿ ಪ್ರೇಕ್ಷಕರಿಗೆ ತಲೆಯಲ್ಲಿ ಹುಳು ಬಿಡುವುದಕ್ಕಿಂತ, ನಾಯಕ ಕೃಷ್ಣ ಅಲಿಯಾಸ್ ಕ್ರಿಸ್ಟಿ ತಲೆಯಲ್ಲಿ ಏನೆಲ್ಲ ಉಪಾಯಗಳಿವೆ ಎನ್ನುವುದೇ ಸಿನಿಮಾದಲ್ಲಿ ತೋರಿಸಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಆರ್‌ಸಿಬಿ ಮ್ಯಾಚ್‌ನಂತೆ ಸೀಟಂಚಲ್ಲಿ ಕೂರಿಸುವ ಥ್ರಿಲ್ಲಿಂಗ್ ಟಚ್ ನೀಡಲಾಗಿದೆ. ಹೀಗಾಗಿ, ಸಿನಿಮಾ ನೋಡಿಸಿಕೊಳ್ಳುತ್ತದೆ. ನಟ ‘ಡಾರ್ಲಿಂಗ್’ ಕೃಷ್ಣ ಜೂಜಿನ ಹುಡುಗನಾಗಿ, ಖತರ್ನಾಕ್ ಕಿಲಾಡಿಯಾಗಿ ಇಷ್ಟವಾಗುವಂತೆ ಅಭಿನಯಿಸಿದ್ದಾರೆ. ಮನಿಷಾ ಕಂದಕೂರ್ ನಟನೆಯಲ್ಲಿ ಕ್ಯೂಟ್‌ನೆಸ್ ಇದೆ. ಡ್ರಾೃಗನ್ ಮಂಜು ವಿಲನ್ ಆದರೂ, ಇಂಗ್ಲೀಷ್ ಮಾತನಾಡುತ್ತಲೇ ನಗಿಸುತ್ತಾರೆ. ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಮಾನಸಿ ಸುಧೀರ್ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ‘ನಾನೆ ನೀನಂತೆ’ ಮತ್ತು ‘ಗಂಗಿ ಗಂಗಿ’ ಹಾಡುಗಳು ಕೇಳಲು, ನೋಡಲು ಅಂದವಾಗಿವೆ. ಹಿನ್ನೆಲೆ ಸಂಗೀತ ಕೂಡ ಭರ್ಜರಿಯಾಗಿ ಮೂಡಿಬಂದಿದೆ.

ರೇಟಿಂಗ್: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net