ಮೂರು ಭಾಗಗಳಲ್ಲಿ ಬರಲಿದೆ ಬ್ರಹ್ಮಾಸ್ತ್ರ; 2022ರ ಸೆ.9ಕ್ಕೆ ಮೊದಲ ಭಾಗ ಬಿಡುಗಡೆ

sdfsdfbasd
Published on

ಒಂದು ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದು ಹೊಸ ವಿಷಯವೇನಲ್ಲ. ‘ಬಾಹುಬಲಿ’, ‘ಕೆಜಿಎಫ್’, ಪುಪ್ಪ’, ‘ಎನ್.ಟಿ.ಆರ್’, ‘ಅವತಾರ್ ಪುರುಷ’, ‘ತೋತಾಪುರಿ’ ಸೇರಿ ಹಲವು ಚಿತ್ರಗಳನ್ನು ಉದಾಹರಿಸಬಹುದು. ಈಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಮೂರು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.

2018ರಲ್ಲಿ ಪ್ರಾರಂಭವಾಯ್ತು ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣ. ಬಲ್ಗೇರಿಯಾ, ಲಂಡನ್, ಎಡಿನ್​ಬರ್ಗ್, ನ್ಯೂಯಾರ್ಕ್, ವಾರಾಣಸಿ ಮುಂತಾದ ಕಡೆ ಚಿತ್ರೀಕರಣ ನಡೆಯಿತು. ಇದೀಗ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಬಿಡುಗಡೆಯಾಗಿಯೇ ಎರಡು ವರ್ಷಗಳಾಗಿರಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಕೆಲಸಗಳು ತಡವಾದ ಹಿನ್ನೆಲೆಯಲ್ಲಿ, 2022ರ ಸೆಪ್ಟೆಂಬರ್ 9ಕ್ಕೆ ಚಿತ್ರದ ಮೊದಲ ಭಾಗ ಬಿಡುಗಡೆಯಾಗಲಿದೆ.

ಆ ನಂತರ ಕೆಲವು ತಿಂಗಳುಗಳ ಗ್ಯಾಪ್​ನಲ್ಲಿ ಎರಡು ಮತ್ತು ಮೂರನೆಯ ಭಾಗಗಳು ಬಿಡುಗಡೆಯಾಗಲಿವೆ. ‘ಬ್ರಹ್ಮಾಸ್ತ್ರ’ ಚಿತ್ರದ ಮೋಷನ್ ಪೋಸ್ಟರ್, ಬುಧವಾರ ಸಂಜೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಭಟ್ ಜತೆಗೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಮುಂತಾದವರು ನಟಿಸಿದ್ದು, ಈ ಹಿಂದೆ ‘ವೇಕಪ್ ಸಿದ್’ ‘ಯೇ ಜವಾನಿ ಯೇ ದಿವಾನಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net