

ಕಳೆದ ವಾರ ಬಾಲಿವುಡ್ನಲ್ಲಿ ಆಮಿರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಮತ್ತು ಅಕ್ಷಯ್ ಕುಮಾರ್ ನಟನೆಯ ‘ರಕ್ಷಾಬಂಧನ್’ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ ಆ ಸ್ಟಾರ್ಗಳ ಹಾಗೂ ಚಿತ್ರತಂಡದ ಕೆಲವು ಸದಸ್ಯರ ಹಿಂದುವಿರೋಧಿ ಹೇಳಿಕೆಗಳಿಂದ ಆನ್ಲೈನ್ನಲ್ಲಿ ಎರಡು ಚಿತ್ರಗಳನ್ನೂ ಬಾಯ್ಕಾಟ್ ಮಾಡುವ ಬಗ್ಗೆ ಟ್ರೆಂಡ್ ಆಗಿತ್ತು. ಅದರ ಪರಿಣಾಮವೋ ಅಥವಾ ಬೇರೆ ಕಾರಣವೋ, ಎರಡು ಚಿತ್ರಗಳಿಗೂ ಥಿಯೇಟರ್ಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಂತ ಸದ್ಯಕ್ಕೆ ಈ ಬಾಯ್ಕಾಟ್ ಟ್ರೆಂಡ್ ಅಲ್ಲಿಗೇ ನಿಂತಿಲ್ಲ. ಬದಲಾಗಿ, ಶಾರುಖ್ ಖಾನ್, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಚಿತ್ರಗಳಿಗೂ ಬಿಸಿ ಮುಟ್ಟಿಸಲು ಸಿದ್ಧತೆ ನಡೆದಿದೆ.
ಹೌದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿರುವ ‘ಪಠಾಣ್’ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಆದರೆ, ಈಗಲೇ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂಬ ಟ್ರೆಂಡ್ ಟ್ವಿಟರ್ನಲ್ಲಿ ಪ್ರಾರಂಭವಾಗಿದೆ. ಅದಕ್ಕೆ ಈ ಹಿಂದೆ ಶಾರುಖ್ ಖಾನ್ ಅಸಹಿಷ್ಣುತೆ ಕುರಿತ ಹೇಳಿಕೆ ಮತ್ತು ದೀಪಿಕಾ ಪಡುಕೋಣೆ ಅವರ ಜೆಎನ್ಯುು (ಜವಾಹರ್ಲಾಲ್ ನೆಹರು ಯೂನಿವರ್ಸಿಟಿ) ಪ್ರತಿಭಟನೆಗೆ ಭೇಟಿ ಕಾರಣ ಎನ್ನಲಾಗಿದೆ. ಇನ್ನು ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಷನ್, ‘ಲಾಲ್ ಸಿಂಗ್ ಛಡ್ಡಾ’ ಚಿತ್ರ ವೀಕ್ಷಿಸಿ ಹೊಗಳಿದ್ದರು. ಇದು ಆನ್ಲೈನ್ ಬಾಯ್ಕಾಟ್ ಮಾಡುತ್ತಿದ್ದವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಅವರು ನಟಿಸುತ್ತಿರುವ ‘ವಿಕ್ರಮ್ ವೇದಾ’ ಚಿತ್ರಕ್ಕೂ ಬಾಯ್ಕಾಟ್ ಬಿಸಿ ತಟ್ಟಿದೆ.
ಚಿತ್ರ ಇದೇ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆಯಿದ್ದು, ಬಾಯ್ಕಾಟ್ ವಿಕ್ರಮ್ ವೇದಾ ಎಂಬ ಹ್ಯಾಶ್ಟ್ಯಾಗ್ ಕೂಡ ಆನ್ಲೈನ್ನಲ್ಲಿ ಸದ್ದು ಮಾಡುತ್ತಿದೆ. ಅದೇ ರೀತಿ ನಟ ರಣಬೀರ್ ಕಪೂರ್ ಅವರ ‘ಬ್ರಹ್ಮಾಸ್ತ್ರ - ಪಾರ್ಟ್ 1 ಶಿವ’ ಚಿತ್ರ ಕೂಡ ಇದೇ ಸೆಪ್ಟೆಂಬರ್ 9ರಂದು ತೆರೆಗೆ ಬರಲಿದ್ದು, ಆ ಚಿತ್ರಕ್ಕೂ ಬಾಯ್ಕಾಟ್ ಕರೆ ನೀಡಲಾಗಿದೆ. ಚಿತ್ರದ ಟ್ರೇಲರ್ನಲ್ಲಿ ರಣಬೀರ್ ಅವರು ಶೂ ಧರಿಸಿ ದೇವಸ್ಥಾನದ ಆವರಣದಲ್ಲಿ ಘಂಟೆ ಬಾರಿಸುವ ದೃಶ್ಯವಿದ್ದು, ಅದು ಆನ್ಲೈನ್ ಸನಾತನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ‘ಬ್ರಹ್ಮಾಸ್ತ್ರ’ ಚಿತ್ರವನ್ನೂ ಬಾಯ್ಕಾಟ್ ಮಾಡಲು ಕರೆ ನೀಡಿದ್ದಾರೆ. -ಏಜೆನ್ಸೀಸ್