

ಜಾಕ್ಲೀನ್ ಫರ್ನಾಂಡಿಸ್ಗೆ ಬಾಲಿವುಡ್ ಅಲಿಖಿತ ಬಹಿಷ್ಕಾರ ಹಾಕಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಕೆಲವೇ ವರ್ಷಗಳ ಹಿಂದೆ ಜಾಕ್ಲೀನ್, ಬಾಲಿವುಡ್ನ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. ಆದರೆ, ಯಾವಾಗ ಅವರ ಹೆಸರು ವಂಚಕ ಸುಕೇಶ್ ಚಂದ್ರಶೇಖರ್ ಜತೆಗೆ ತಳಕು ಹಾಕಿಕೊಂಡಿತೋ, ಆಗಿನಿಂದ ಜಾಕ್ಲೀನ್ಗೆ ಬಾಲಿವುಡ್ನಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ.
ಹೌದು, ಬಾಲಿವುಡ್ನಲ್ಲಿ ಜಾಕ್ಲೀನ್ಗೆ ಬೇಡಿಕೆ ಬಹಳ ಕಡಿಮೆಯಾಗಿದೆ. ಈ ವರ್ಷ ಈಗಾಗಲೇ ಜಾಕ್ಲೀನ್ ಅಭಿನಯದ ‘ಬಚ್ಚನ್ ಪಾಂಡೆ’, ‘ಅಟ್ಯಾಕ್’ ಮತ್ತು ‘ವಿಕ್ರಾಂತ್ ರೋಣ’ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ದಿನಗಳಲ್ಲಿ ‘ಸರ್ಕಸ್’ ಮತ್ತು ‘ರಾಮ್ ಸೇತು’ ಚಿತ್ರಗಳು ಬಿಡುಗಡೆಯಾಗಲಿವೆ. ಇವೆಲ್ಲವೂ ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬರುವ ಮೊದಲು ಒಪ್ಪಿಕೊಂಡ ಚಿತ್ರಗಳು. ಆ ನಂತರ ಜಾಕ್ಲೀನ್ ಯಾವ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ.
ಒಪ್ಪಿಕೊಂಡಿಲ್ಲ ಎನ್ನುವುದಕ್ಕಿಂತ ಯಾರೊಬ್ಬರು ಸಹ ಜಾಕ್ಲೀನ್ಗೆ ಅವಕಾಶ ಕೊಡುವುದಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಅವಕಾಶ ಕೊಟ್ಟು, ನಾಳೆ ಜಾಕ್ಲೀನ್ ಸೆರೆವಾಸ ಅನುಭವಿಸಬೇಕಾಗಿ ಬಂದರೆ, ಆಗ ಚಿತ್ರಕ್ಕೆ ಸಮಸ್ಯೆ ಎಂಬ ಭಯದಿಂದ ಬಾಲಿವುಡ್ ಮಂದಿ ಅವರನ್ನು ಅಲಿಖಿತ ಬಹಿಷ್ಕಾರ ಹಾಕಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ, ಕಳೆದೊಂದು ವರ್ಷದಿಂದ ಯಾವುದೇ ಹೊಸ ಚಿತ್ರದಲ್ಲೂ ಜಾಕ್ಲೀನ್ ಹೆಸರು ಕಾಣಿಸಿಲ್ಲ. -ಏಜೆನ್ಸೀಸ್