

ವಿಜಯ್ ದೇವರಕೊಂಡ ಅಭಿನಯದ "ಲೈಗರ್' ಎಂಬ ಪ್ಯಾನ್ಇಂಡಿಯಾ ಚಿತ್ರದಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಬಹಳಷ್ಟು ಜನ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏಕೆಂದರೆ, ಟೈಸನ್ ನಟಿಸಬಹುದು ಎಂದು ಯಾರಿಗೂ ನಂಬಿಕೆ ಇರಲಿಲ್ಲ. ಅದಕ್ಕೆ ಸರಿಯಾಗಿ, ಚಿತ್ರತಂಡದವರು ಟೈಸನ್ ಅವರನ್ನು ಸಂಪರ್ಕಿಸಿದಾಗ, ಅವರೇನು ಅಷ್ಟು ಆಸಕ್ತಿ ತೋರಿಸಲಿಲ್ಲವಂತೆ. "ಆಯ್ತು ನೋಡೋಣ ...' ಎಂದು ಒಂದಿಷ್ಟು ಸಮಯ ತೆಗೆದುಕೊಂಡ ಟೈಸನ್, ಇದೀಗ ಚಿತ್ರದಲ್ಲಿ ನಟಿಸುವುದಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಎಲ್ಲ ಅಂದುಕೊಂಡಂತೆ ಆದರೆ, ಸದ್ಯದಲ್ಲೇ ಅವರ ಭಾಗದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟೈಸನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯೇ ಹೊರತು, ಚಿತ್ರದಲ್ಲಿ ಅವರ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಟೈಸನ್ ಆಗಿಯೇ ಕಾಣಿಸಿಕೊಳ್ಳುತ್ತಾರಾ? ಅಥವಾ ಚಿತ್ರದಲ್ಲಿ ಬಾಕ್ಸರ್ ಪಾತ್ರ ಮಾಡುತ್ತಿರುವ ದೇವರಕೊಂಡಗೆ ಗುರುವಾಗಿ ಬಾಕ್ಸಿಂಗ್ ಹೇಳಿಕೊಡುತ್ತಾರಾ? ಎಂಬ ರಹಸ್ಯ ಇನ್ನಷ್ಟೇ ಬಯಲಾಗಬೇಕಿದೆ. "ಲೈಗರ್' ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸುವುದರ ಜತೆಗೆ, ಕರಣ್ ಜೋಹರ್ ಜತೆಗೆ ಸೇರಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ.