ಬೆಲ್​ಬಾಟಂಗೆ ಬಸಣ್ಣಿ ಬಂದ್ರು: ಹರಿಪ್ರಿಯಾನೂ ಇರ್ತಾರೆ; ಜತೆಗೆ ತಾನ್ಯಾ ಬೋನಸ್

Tanya Hope
Published on

ಬೆಂಗಳೂರು: ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರಲಿರುವ ‘ಬೆಲ್​ಬಾಟಂ’ನ ಮುಂದುವರಿದ ಭಾಗದ ಕುರಿತಾಗಿ ಕೆಲವು ದಿನಗಳಿಂದ ಸುದ್ದಿಗಳು ಬರುತ್ತಲೇ ಇದ್ದವು. ಇದೀಗ ಆ ಚಿತ್ರಕ್ಕೆ ತಾನ್ಯಾ ಹೋಪ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ.

ಚಿತ್ರತಂಡಕ್ಕೆ ತಾನ್ಯಾ ಸೇರ್ಪಡೆಯಾಗಿದೆ ಎನ್ನುತ್ತಿದ್ದಂತೆಯೇ, ಅರೇ ... ಮತ್ತೆ ಹರಿಪ್ರಿಯಾ? ಎಂಬ ಪ್ರಶ್ನೆ ಬರುವುದು ಸಹಜ. ‘ಬೆಲ್​ಬಾಟಮ್​ನ ಮುಂದುವರಿದ ಭಾಗದಲ್ಲಿ ಎಂದಿನಂತೆ ಹರಿಪ್ರಿಯಾ ಪಾತ್ರ ಮುಂದುವರಿಯಲಿದೆ. ಅವರ ಜತೆಗೆ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ತಾನ್ಯಾ ಪಾತ್ರ ಎಂಟ್ರಿಯಾಗಲಿದೆಯಂತೆ. ಚಿತ್ರದ ಒಂದೆಳೆ ಕೇಳಿಯೇ ನಟಿಸಲು ಒಪ್ಪಿಕೊಂಡಿರುವ ಅವರು, ಹಿಂದೆಂದೂ ಕಾಣಿಸದ ಪಾತ್ರದಲ್ಲಿ ಈ ಸಿನಿಮಾದಲ್ಲಿ ಎದುರಾಗಲಿದ್ದಾರಂತೆ. ರಿಷಬ್ ಮತ್ತು ಹರಿಪ್ರಿಯಾ ಜತೆ ನಟಿಸಲು ಕೂಡ ಉತ್ಸುಕರಾಗಿದ್ದಾರೆ.

2019ರಲ್ಲಿ ‘ಯಜಮಾನ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ತಾನ್ಯಾ. ಕೇವಲ ಮೂರೇ ತಿಂಗಳಲ್ಲಿ ಅವರ ಮೂರು ಸಿನಿಮಾಗಳು ಬಿಡುಗಡೆಯಾಗಿದ್ದವು. ‘ಯಜಮಾನ’, ‘ಉದ್ಘರ್ಷ’ ಮತ್ತು ‘ಅಮರ್’ ಚಿತ್ರಗಳ ಬಿಡುಗಡೆಯ ನಂತರ, ಚಿರು ಸರ್ಜಾ ಜತೆಗೆ ‘ಖಾಕಿ’ ಸಿನಿಮಾದಲ್ಲಿಯೂ ನಟಿಸಿದ್ದರು. ಉಪೇಂದ್ರ ಜತೆ ‘ಹೋಮ್ ಮಿನಿಸ್ಟರ್’ ಚಿತ್ರದಲ್ಲಿ ನಟಿಸಿದ್ದರಾದರೂ, ಆ ಚಿತ್ರಕ್ಕಿನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದೀಗ ಒಂದು ವರ್ಷದ ಬಳಿಕ ಮತ್ತೆ ಹೊಸ ಚಿತ್ರದೊಂದಿಗೆ ತಾನ್ಯಾ ಬರುತ್ತಿದ್ದಾರೆ.

ಸದ್ಯ, ‘ಬೆಲ್​ಬಾಟಂ 2’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಕೊನೆಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಎಂದಿನಂತೆ ಟಿ.ಕೆ ದಯಾನಂದ್ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಮೊದಲ ಭಾಗದ ತಾಂತ್ರಿಕ ವರ್ಗದಲ್ಲಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಕಲನಕಾರ ಕೆ.ಎಂ ಪ್ರಕಾಶ್ ಇಲ್ಲಿಯೂ ಮುಂದುವರಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net