"ರಾಮನನ್ನು ದುರ್ಬಲ ಮಾಡಿ, ರಾವಣನನ್ನು ಹೀರೋ ಮಾಡಿದ್ದೀರಿ": 'ರಾಮಾಯಣ' ಚಿತ್ರದ ವಿರುದ್ಧ ನಿತೀಶ್ ಭಾರದ್ವಾಜ್ ಆಕ್ರೋಶ! Ramayana Part 1

Actor Nitish Bharadwaj criticized the portrayal of the characters of Ravana and Rama in Nitesh Tiwari's film 'Ramayana: Part 1'.
ನಿತೇಶ್ ತಿವಾರಿ ಅವರ 'ರಾಮಾಯಣ: ಭಾಗ 1' ಸಿನಿಮಾದಲ್ಲಿ ರಾವಣ ಮತ್ತು ರಾಮನ ಪಾತ್ರಗಳ ಚಿತ್ರಣವನ್ನು ಟೀಕಿಸಿದ ನಟ ನಿತೀಶ್ ಭಾರದ್ವಾಜ್
Published on: 

ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚುತ್ತಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' ಸಿನಿಮಾಗೆ ಈಗ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ರಣಬೀರ್ ಕಪೂರ್ ರಾಮನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸಿರುವ ಈ ಚಿತ್ರಕ್ಕೆ ಒಂದೆಡೆ ಭರ್ಜರಿ ಕಲೆಕ್ಷನ್ ಆಗುತ್ತಿದ್ದರೆ, ಇನ್ನೊಂದೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಿ.ಆರ್. ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿ ಮನೆಮಾತಾಗಿದ್ದ ನಟ ನಿತೀಶ್ ಭಾರದ್ವಾಜ್ ಈಗ ಈ ಸಿನಿಮಾದ ವಿರುದ್ಧ ಗುಡುಗಿದ್ದಾರೆ.

ಆಸ್ಕರ್ ಗೆಲ್ಲುತ್ತೆ ಅಂದವರು ಈಗ ಕಿಡಿಕಾರಿದ್ದೇಕೆ?

ಖಾಸಿ ವಾಹಿನಿವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ನಿತೀಶ್ ಭಾರದ್ವಾಜ್, ಇದೊಂದು ನಿರ್ದಿಷ್ಟ ಅಜೆಂಡಾ ಇಟ್ಟುಕೊಂಡು ಮಾಡಿರುವ ಸಿನಿಮಾ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಕೆಲ ದಿನಗಳ ಹಿಂದೆ, ರಾಮಾಯಣ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದ ಭಾರದ್ವಾಜ್, ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಬಹುದು ಎಂದು ಭವಿಷ್ಯ ನುಡಿದಿದ್ದರು. 4,000 ಕೋಟಿ ಬಜೆಟ್, ನಿತೇಶ್ ತಿವಾರಿ ನಿರ್ದೇಶನ ಮತ್ತು ಎ.ಆರ್. ರೆಹಮಾನ್ ಸಂಗೀತದ ಮೇಲೆ ಅವರಿಗೆ ಭರವಸೆ ಇತ್ತು. ಆದರೆ, ಪೂರ್ತಿ ಸಿನಿಮಾ ನೋಡಿದ ಮೇಲೆ ಅವರ ಅಭಿಪ್ರಾಯ ಸಂಪೂರ್ಣ ಬದಲಾಗಿದೆ.

ರಾವಣನನ್ನು 'ಕೂಲ್ ಹೀರೋ' ಮಾಡಿದ್ದಕ್ಕೆ ಆಕ್ರೋಶ!

ಚಿತ್ರದಲ್ಲಿ ಯಶ್ ನಿರ್ವಹಿಸಿರುವ ರಾವಣನ ಪಾತ್ರದ ಬಗ್ಗೆ ನಿತೀಶ್ ಭಾರದ್ವಾಜ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ರಾವಣನನ್ನು ಅತ್ಯಂತ ಒಳ್ಳೆಯವನಂತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಒಬ್ಬ ಕಮ್ಯುನಿಸ್ಟ್ ನಾಯಕನಂತೆ ತೋರಿಸಲಾಗಿದೆ. ಅವನಲ್ಲಿದ್ದ ಕೆಟ್ಟ ಗುಣಗಳನ್ನು ಎಲ್ಲಿಯೂ ತೋರಿಸಿಲ್ಲ. ಇಂದಿನ ಯುವ ಪೀಳಿಗೆ ರಾಮಾಯಣ ಓದಿಲ್ಲ, ಈ ಸಿನಿಮಾ ನೋಡಿ ಮುಂದಿನ ಎರಡು ವರ್ಷ ರಾವಣನನ್ನು ಒಬ್ಬ ಕೂಲ್ ಹೀರೋ ಎಂದು ಆರಾಧಿಸಲು ಶುರುಮಾಡುತ್ತಾರೆ" ಎಂದು ಅವರು ಕಿಡಿಕಾರಿದ್ದಾರೆ.

ಇದು ರಾಮನಲ್ಲ, ಇವನೊಬ್ಬ ದುರ್ಬಲ ವ್ಯಕ್ತಿ!

ರಣಬೀರ್ ಕಪೂರ್ ನಿರ್ವಹಿಸಿರುವ ಶ್ರೀರಾಮನ ಪಾತ್ರದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮನನ್ನು ಭಾವನೆಗಳೇ ಇಲ್ಲದ ಒಬ್ಬ ಸಾಮಾನ್ಯ ಮತ್ತು ದುರ್ಬಲ ವ್ಯಕ್ತಿಯಂತೆ ತೋರಿಸಲಾಗಿದೆ. ಅಯೋಧ್ಯೆ ಬಿಟ್ಟು ಹೋಗುವಾಗ ರಾಮ ಅಳುವಂತೆ ಚಿತ್ರಿಸಿರುವುದು ಸರಿಯಲ್ಲ. ರಘುಕುಲದ ಗೌರವ ಮತ್ತು ಮರ್ಯಾದೆಯನ್ನು ತೋರಿಸುವಲ್ಲಿ ಚಿತ್ರತಂಡ ವಿಫಲವಾಗಿದೆ. ಖಳನಾಯಕನನ್ನು ಹೀರೋ ಮಾಡಿ, ಹೀರೋನನ್ನು ವಿಲನ್ ಮಾಡುವ ಪ್ರಯತ್ನ ಇಲ್ಲಿ ನಡೆದಿದೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.

Also Read
ಭಯೋತ್ಪಾದನೆ ವಿರುದ್ಧ ಐತಿಹಾಸಿಕ ಜಯ: "ಕಾಶ್ಮೀರದಲ್ಲೀಗ ಒಬ್ಬನೇ ಒಬ್ಬ ಸ್ಥಳೀಯ ಉಗ್ರನಿಲ್ಲ"! ಅಮಿತ್ ಶಾ ಘೋಷಣೆ| Amit Shah
Actor Nitish Bharadwaj criticized the portrayal of the characters of Ravana and Rama in Nitesh Tiwari's film 'Ramayana: Part 1'.

ನಿರ್ಮಾಪಕರಿಗೆ ನೇರ ಪ್ರಶ್ನೆ!

ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ಎರಡು ನೇರ ಪ್ರಶ್ನೆಗಳನ್ನು ಕೇಳಿರುವ ಭಾರದ್ವಾಜ್, "ನಿಮ್ಮ ಸಿನಿಮಾದಲ್ಲಿ ತೋರಿಸಿದಂತೆ ರಾವಣ ಅಷ್ಟೊಂದು ಜ್ಞಾನಿ ಮತ್ತು ಒಳ್ಳೆಯ ರಾಜನಾಗಿದ್ದರೆ, ವಿಷ್ಣು ರಾಮನಾಗಿ ಅವತಾರ ಎತ್ತುವ ಅಗತ್ಯವೇನಿತ್ತು? ಇನ್ನು ಎರಡನೇ ಭಾಗದಲ್ಲಿ ನೀವು ತೋರಿಸಿರುವ ಈ ದುರ್ಬಲ ರಾಮ, ಅಷ್ಟೊಂದು ಬಲಿಷ್ಠ ರಾವಣನನ್ನು ಹೇಗೆ ಕೊಲ್ಲುತ್ತಾನೆ? ಎಂದು ಪ್ರಶ್ನಿಸಿದ್ದಾರೆ.

4,000 ಕೋಟಿ ಹಣ ಎಲ್ಲಿಂದ ಬಂತು? ತನಿಖೆಗೆ ಆಗ್ರಹ!

ಈ ಸಿನಿಮಾಕ್ಕೆ ಹೂಡಿಕೆಯಾಗಿರುವ ಬಂಡವಾಳದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಿರ್ಮಾಣ ಸಂಸ್ಥೆಗೆ ಲಕ್ಸೆಂಬರ್ಗ್, ಯುಎಇ ಮತ್ತು ಸಿಂಗಾಪುರದಿಂದ ಹಣ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯನ್ನು ಕುಗ್ಗಿಸಲು ಸಿನಿಮಾವನ್ನು ಬಳಸಿಕೊಳ್ಳಲಾಗುತ್ತಿದೆ. ಇವರು ಹೊಸ ಕಾಲದ ಬ್ರಿಟಿಷರು. ಈ ಸಿನಿಮಾಗೆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಬೇರೆ ಧರ್ಮಗಳ ಬಗ್ಗೆ ಬಾಲಿವುಡ್ ಹೀಗೆ ಸಿನಿಮಾ ಮಾಡಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ, (ಏಜೆನ್ಸೀಸ್​).