ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್: 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಾಕಿ ಭಾಯ್ ಅಬ್ಬರ! Toxic

ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ (Toxic  ಚಿತ್ರ Instagram)
ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ (Toxic ಚಿತ್ರ Instagram)
Published on

Toxic:

ಸ್ಯಾಂಡಲ್‌ವುಡ್​ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಬೃಹತ್​ ಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲು ಸಜ್ಜಾಗಿದೆ. ಬಹುಭಾಷಾ ಬಿಡುಗಡೆ ಹಾಗೂ ವ್ಯಾಪಕ ವಿತರಣಾ ಯೋಜನೆಯಿಂದಾಗಿ ಈ ಆಕ್ಷನ್​ ಡ್ರಾಮಾ ಸಿನಿಮಾ ಈಗಾಗಲೇ ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಶುಕ್ರವಾರದಿಂದ ಮುಂಗಡ ಬುಕಿಂಗ್ ಆರಂಭ

ಚಿತ್ರ ಬಿಡುಗಡೆಗೆ ಐದು ದಿನಗಳು ಬಾಕಿ ಇರುವಾಗಲೇ ಭಾರತದಲ್ಲಿ 'ಟಾಕ್ಸಿಕ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಮುಂಬರುವ ಶುಕ್ರವಾರದಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಟ್ರೇಡ್ ಟ್ರ್ಯಾಕರ್ ಸಾಕ್ನಿಲ್ಕ್ ವರದಿಯ ಪ್ರಕಾರ, ಈ ಚಿತ್ರವನ್ನು ವಿಶ್ವಾದ್ಯಂತ ಸುಮಾರು 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಆದರೆ ಅಂತಿಮ ಸ್ಕ್ರೀನ್ ಸಂಖ್ಯೆಯ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ಈ ಪೈಕಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಆವೃತ್ತಿಯ ವಿತರಣಾ ಹಕ್ಕನ್ನು ಖ್ಯಾತ ಸಂಸ್ಥೆ ಲೈಯನ್ಸ್ ಗೇಟ್ ಪಡೆದುಕೊಂಡಿದೆ.

ದೇಶಾದ್ಯಂತ ಘಟಾನುಘಟಿ ವಿತರಕರ ಸಾಥ್

ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಿ ವಿತರಣಾ ಸಂಸ್ಥೆಗಳು 'ಟಾಕ್ಸಿಕ್' ಸಿನಿಮಾವನ್ನು ದೇಶಾದ್ಯಂತ ಪ್ರೇಕ್ಷಕರ ಬಳಿಗೆ ತಲುಪಿಸಲು ಕೈಜೋಡಿಸಿವೆ. ಉತ್ತರ ಭಾರತ ಮತ್ತು ನೆರೆಯ ದೇಶ ನೇಪಾಳದ ವಿತರಣಾ ಹಕ್ಕನ್ನು ಎಎ ಫಿಲ್ಮ್ಸ್ ಪಡೆದುಕೊಂಡಿದ್ದರೆ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾರುಕಟ್ಟೆಗಳಲ್ಲಿ ಶ್ರೀ ವೆಂಕಟೇಶ್ವರ ಕೃಷನ್ಸ್ ಸಂಸ್ಥೆಯು ಚಿತ್ರವನ್ನು ತೆರೆಗೆ ತರಲಿದೆ.
ಇನ್ನು ಕೇರಳದಲ್ಲಿ ಪನೋರಮಾ ಫಿಲ್ಮ್ಸ್ ಸಿನಿಮಾ ಬಿಡುಗಡೆಯ ಜವಾಬ್ದಾರಿ ವಹಿಸಿಕೊಂಡಿದೆ. ತಮಿಳುನಾಡು ರಾಜ್ಯದಲ್ಲಿ ಥಿಂಕ್ ಸ್ಟುಡಿಯೋಸ್, ಎಸ್ ಪಿಕ್ಚರ್ಸ್, ವೈಟ್ ನೈಟ್ಸ್, ಟ್ರೈಡೆಂಟ್ ಆರ್ಟ್ಸ್ ಹಾಗೂ ಫೈವ್ ಸ್ಟಾರ್ ಸೆಂಥಿಲ್ ಸಂಸ್ಥೆಗಳು ಜಂಟಿಯಾಗಿ ಈ ಬೃಹತ್ ಚಿತ್ರದ ವಿತರಣೆಯನ್ನು ನಿರ್ವಹಿಸಲಿವೆ.

ತಾರಾಗಣ, ರನ್ ಟೈಮ್ ಮತ್ತು ಸೆನ್ಸಾರ್ ಮಾಹಿತಿ

ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗೀತು ಮೋಹನ್‌ದಾಸ್ ಕಥೆ ಬರೆದು ನಿರ್ದೇಶಿಸಿರುವ ಈ ಬೃಹತ್ ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್​ ಹಾಗೂ ಮಾನ್​ಸ್ಟರ್ ಮೈಂಡ್​ ಕ್ರಿಯೇಷನ್ಸ್​ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೆ 'ಟಾಕ್ಸಿಕ್' ಪಾತ್ರವಾಗಿದೆ. ತೀವ್ರತರವಾದ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರುವ ಕಾರಣ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'A' (18+) ಪ್ರಮಾಣಪತ್ರ ನೀಡಿದ್ದು, ಚಿತ್ರದ ಒಟ್ಟು ಅವಧಿ 3 ಗಂಟೆ 14 ನಿಮಿಷಗಳಷ್ಟಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net