_1787412000724.webp?w=480&auto=format%2Ccompress&fit=max)
_1787412000724.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ನಟ ಜೋಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ತ್ರಿಷಾ ಹೆಸರು ರಾಜಕೀಯವಾಗಿ ಹೆಚ್ಚು ಕೇಳಿಬರುತ್ತಿದೆ. ಏತನ್ಮಧ್ಯೆ, ನಟಿ ಮಾತ್ರ ಯಾವುದೇ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಬಣ್ಣದ ಬದುಕಿನಲ್ಲಿ ಬಿಜಿಯಾಗಿದ್ದಾರೆ. ಮೇನಲ್ಲಿ ತೆರೆಕಂಡಿದ್ದ ತಮಿಳಿನ ‘ಕರುಪ್ಪು’ ಬಾಕ್ಸಾಫೀಸ್‌ನಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ತ್ರಿಷಾ ಸಂಭಾವನೆಯನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ತೆಲುಗಿನ ‘ವಿಶ್ವಂಭರ’ ಚಿತ್ರದ ರಿಲೀಸ್‌ಗೆ ಅವರು ಎದುರು ನೋಡುತ್ತಿದ್ದಾರೆ. ಹೀಗಿರುವಾಗಲೇ ನಟಿ ವೆಬ್ ಸರಣಿಯೊಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕಿ ನಂದಿನಿ ರೆಡ್ಡಿ ಸೂಪರ್ ನ್ಯಾಚುರಲ್ ವೆಬ್ ಸರಣಿಯೊಂದನ್ನು ತೆರೆ ಮೇಲೆ ತರಲು ಮುಂದಾಗುತ್ತಿದ್ದಾರೆ. ಈ ಸರಣಿಯಲ್ಲಿ ತ್ರಿಷಾ ಕೃಷ್ಣನ್ ಮುಖ್ಯಪಾತ್ರದಲ್ಲಿ ನಟಿಸುವುದು ಖಚಿತವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಂದಿನಿ ರೆಡ್ಡಿ ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದು, ಇದೀಗ ಶೂಟಿಂಗ್‌ಗೆ ತೆರಳಲು ನಿಶ್ಚಯಿಸಿದ್ದಾರೆ. ಇನ್ನು ತ್ರಿಷಾ ಒಟಿಟಿಗೆ ಲಗ್ಗೆ ಇಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತೆಲುಗಿನ ‘ಬೃಂದಾ’ (2024) ಸರಣಿಯಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಒಟಿಟಿಗೆ ದಾಪುಗಾಲಿಡುತ್ತಿದ್ದಾರೆ. ಉಳಿದಂತೆ, ತ್ರಿಷಾ ಇತ್ತೀಚೆಗೆ ಕಾರ್ತಿ ಅಭಿನಯಿಸಲಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.-ಏಜೆನ್ಸೀಸ್