ಶಾಂತಾರಾಮ್ ಬಯೋಪಿಕ್‌ನಲ್ಲಿ ತಮನ್ನಾ, ಸಿದ್ಧಾಂತ್ : ತೆರೆಗೆ ಬರಲಿದೆ ಹಿಂದಿ, ಮರಾಠಿ ಚಿತ್ರರಂಗದ ದಿಗ್ಗಜ ನಿರ್ದೇಶಕನ ಜೀವನಗಾಥೆ

ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಬಿಜಿಯ ನಡುವೆ ಮತ್ತೊಂದು ಹಿಂದಿ ಸಿನಿಮಾ ಒಪ್ಪಿಕೊಂಡ ತಮನ್ನಾ
  • ವಿ.ಶಾಂತಾರಾಮ್ ಬಯೋಪಿಕ್ ಗೆ ಸಿದ್ಧತೆ
  • ಗಟ್ಟಿ ಮಹಿಳಾ ಪಾತ್ರದಲ್ಲಿ ಗಟ್ಟಿಗಿತ್ತಿ ತಮನ್ನಾ
tamanna bhatia: ಬಹುಭಾಷಾ ತಾರೆ ತಮನ್ನಾ ಭಾಟಿಯಾ ದಿನದಿಂದ ದಿನಕ್ಕೆ ಸಿನಿಮಾಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರು ತೆಲುಗು, ತಮಿಳು ಮತ್ತು ಹಿಂದಿ ಸೇರಿ 8 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕೆಲ ಸಿನಿಮಾಗಳ ಶೂಟಿಂಗ್ ಮುಗಿದಿದ್ದು, ಕೆಲ ಚಿತ್ರಗಳು ಬೇರೆ ಬೇರೆ ಹಂತದಲ್ಲಿವೆ. ಈ ಬಿಜಿಯ ನಡುವೆಯೇ ತಮನ್ನಾ ಮತ್ತೊಂದು ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ.
‘ಗಲ್ಲಿ ಬಾಯ್’, ‘ಯುಧ್ರ’ ಖ್ಯಾತಿಯ ನಟ ಸಿದ್ಧಾಂತ್ ಚತುರ್ವೇದಿ ‘ಧಡಕ್ 2’ ಬಳಿಕ ಬಾಲಿವುಡ್ ಹಿರಿಯ ನಿರ್ದೇಶಕ ವಿ. ಶಾಂತಾರಾಮ್ ಬಯೋಪಿಕ್‌ನಲ್ಲಿ ನಟಿಸುತ್ತಿರುವುದು ಖಚಿತವಾಗಿದ್ದು, ಚಿತ್ರದ ಫಸ್ಟ್​ ಲುಕ್ ಕೂಡ ಇದೀಗ ರಿಲೀಸ್ ಮಾಡಲಾಗಿದೆ. ಈ ಫಸ್ಟ್ ಲುಕ್​ ಸಿದ್ಧಾಂತ್​, ಶಾಂತಾರಾಮರಾಗಿ ಮಿಂಚಿದ್ದು, ರೆಟ್ರೋ ಲುಕ್ ನಲ್ಲಿ ಗಮನಸೆಳೆಯುತ್ತಾರೆ. ಇದೀಗ ಈ ಚಿತ್ರಕ್ಕೆ ನಟಿ ತಮನ್ನಾ ಭಾಟಿಯಾ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ‘ವೈವಿಧ್ಯಮಯ ಪಾತ್ರಗಳಿಂದಾಗಿ ತಮನ್ನಾ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಯೋಪಿಕ್‌ಗೆ ಅವರು ಸಹ ಜೀವ ತುಂಬಲಿದ್ದಾರೆ. ಪಾತ್ರವು ಸವಾಲಿನಿಂದ ಕೂಡಿದ್ದು, ಇಲ್ಲಿ ತಮನ್ನಾರನ್ನು ಪ್ರೇಕ್ಷಕರು ವಿಭಿನ್ನ ಪಾತ್ರದಲ್ಲಿ ನೋಡಲಿದ್ದಾರೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಆದರೆ, ತಮನ್ನಾ ಪಾತ್ರ ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ. ಈ ಮಧ್ಯೆ, ತಮನ್ನಾ ಹಾಗೂ ಸಿದ್ದಾಂತ್ ನಡುವಿನ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದೆ. 35 ವರ್ಷದ ತಮನ್ನಾ ತಮಗಿಂತ ಮೂರು ವರ್ಷ ಕಿರಿಯ ನಟ 32 ವರ್ಷದ ಸಿದ್ಧಾಂತ್ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಅದಕ್ಕೆ ಕಾರಣ. ಆದರೆ, ಈ ಬಗ್ಗೆ ತಮನ್ನಾ ಅಥವಾ ಚಿತ್ರತಂಡವಾಗಲಿ ಪ್ರತಿಕ್ರಿಯಿಸಿಲ್ಲ. -ಏಜೆನ್ಸೀಸ್
ಯಾರು ವಿ. ಶಾಂತಾರಾಮ್?
ವಿ ಶಾಂತಾರಾಮ್. 1921ರಿಂದ 1987ರವರೆಗೆ ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ದೊಡ್ಡ ಹೆಸರು. ನಿರ್ದೇಶಕ, ನಟ ಹಾಗೂ ನಿರ್ಮಾಪಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ‘ಉದಕಾಲ್’, ‘ಜನಕ್ ಜನಕ್ ಪಾಯಲ್ ಬಾಜೆ’, ‘ರಾಣಿ ಸಾಹೇಬ’, ‘ಧರ್ಮಾತ್ಮ’, ‘ಶಕುಂತಲಾ’, ‘ಅಪ್ನಾ ದೇಶ್’, ‘ಸೀ’, ‘ಸೆಹ್ರಾ’ ಸೇರಿ ಹಲವು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಶಾಂತಾರಾಮ್ ಅವರಿಗೆ ‘ದಾದಾ ಸಾಹೇಬ್ ಪಾಲ್ಕೆ’, ಪದ್ಮವಿಭೂಷಣ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಶಾಂತಾರಾಮ್ ಕುಟುಂಬದವರು ಮೂಲತಃ ಹುಬ್ಬಳ್ಳಿಯವರು. ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ನ್ಯೂ ಡೆಕ್ಕನ್ ಚಿತ್ರಮಂದಿರದಲ್ಲಿ ಡೋರ್ ಕೀಪರ್ ಆಗಿ ಕೆಲಸ ಮಾಡಿದ್ದರು. ಇಂತಹ ಸಾಮಾನ್ಯ ಹುಡುಗ ಭಾರತೀಯ ಚಿತ್ರರಂಗದ ದಿಗ್ಗಜನಾಗಿ ಬೆಳೆದ ಸಾಹಸಗಾಥೆಯನ್ನು ತಿಳಿಸುವ ಪ್ರಯತ್ನ ಚಿತ್ರತಂಡದ್ದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net