Shalini Pandey - ಬೋಲ್ಡ್​ ವೈರಲ್​ ವಿಡಿಯೋ, ನಾನವಳಲ್ಲ ಎಂದ ನಟಿ

Shalini Pandey
Shalini Pandey
Published on
Shalini Pandey -
ಎಐ ಅರ್ಥಾತ್​ ಕೃತಕ ಬುದ್ಧಿಮತ್ತೆ ಮೂಲಕ ಸೆಲೆಬ್ರಿಟಿಗಳ ನಕಲಿ ಫೋಟೋ, ವಿಡಿಯೋಗಳನ್ನು ಸೃಷ್ಟಿಸಿ ವೈರಲ್​ ಮಾಡುವ ಆನ್​ಲೈನ್​ ಕಿಡಿಗೇಡಿಗಳಿಗೆ ಕಡಿವಾಣ ಬೀಳುತ್ತಿಲ್ಲ. ಈ ನಕಲಿಗಳು ಸಿನಿಮಾ ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಹೀಗಾಗಿಯೇ ವೈಯಕ್ತಿಕ ಹಕ್ಕುಗಳ ರಕ್ಷಣೆ ಕೋರಿ ಕೋರ್ಟ್​ ಮೆಟ್ಟಿಲೇರುತ್ತಿರುವ, ಕಾನೂನು ಕ್ರಮ ಕೈಗೊಳ್ಳುತ್ತಿರುವ ನಟ, ನಟಿಯರ ಸಂಖ್ಯೆಯೂ ಹೆಚ್ಚುತ್ತಿದೆ. ಈಗಾಗಲೇ ಅಮಿತಾಭ್​ ಬಚ್ಚನ್​, ಅಭಿಷೇಕ್​ ಮತ್ತು ಐಶ್ವರ್ಯಾ ದಂಪತಿ, ರಜಿನಿಕಾಂತ್​, ಅಕ್ಷಯ್​ ಕುಮಾರ್​, ಚಿರಂಜೀವಿ ಸೇರಿ ಹಲವಾರು ತಾರೆಯರು ಈಗಾಗಲೇ ತಡೆಯಾಜ್ಞೆ ತಂದಿದ್ದಾರೆ. ಕೆಲವರು ಸೈಬರ್​ ಕೆಮ್​ಗೆ ದೂರು ಸಲ್ಲಿಸಿ, ಎಐವೀರರ ವಿರುದ್ಧ ಸಮರ ಸಾರಿದ್ದಾರೆ. ಇನ್ನು ಕೆಲವರು ತಮ್ಮ ಫೋಟೋ ಅಥವಾ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡು, ಜಾಲತಾಣದ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಇದೀಗ "ಅರ್ಜುನ್​ ರೆಡ್ಡಿ' ಖ್ಯಾತಿಯ ನಟಿ ಶಾಲಿನಿ ಪಾಂಡೆ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಎಐ ಮೂಲಕ ಸೃಷ್ಟಿಸಿದೆ ಎನ್ನಲಾದ ನಟಿಯ ಬೋಲ್ಡ್​ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದು ಗಮನಕ್ಕೆ ಬಂದಾಕ್ಷಣ ಎಚ್ಚೆತ್ತಿರುವ ಶಾಲಿನಿ, "ಇತ್ತೀಚೆಗೆ ಎಐ ಮೂಲಕ ಎಡಿಟ್​ ಮಾಡಿರುವ ವಿಡಿಯೋವನ್ನು ಜಾಲತಾಣದಲ್ಲಿ ಹೆಚ್ಚು ಶೇರ್​ ಮಾಡಲಾಗುತ್ತಿದೆ. ಅದರಲ್ಲಿರುವ ಯುವತಿ ನಾನಲ್ಲ. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಮಹಿಳೆಯನ್ನು ಗುರಿಯಾಗಿಸಿಕೊಂಡು ಹಾನಿ ಮಾಡಲು ಯತ್ನಿಸುತ್ತಿರುವ ಬೆಳವಣಿಗೆ ಆತಂಕಕಾರಿಯಾಗಿದೆ. ಈ ರೀತಿಯ ದೌರ್ಜನ್ಯವನ್ನು ನಾನು ವಿರೋಧಿಸುತ್ತೇನೆ. ಹೀಗೆ ತಂತ್ರಜ್ಞಾನ ದುರ್ಬಳಕೆಯನ್ನು ಸಾಮಾನ್ಯೀಕರಿಸಬಾರದು. ಅಂತಹ ವಿಡಿಯೋ ನಿಮ್ಮ ಗಮನಕ್ಕೆ ಬಂದರೆ ಅದನ್ನು ಡೌನ್​ಲೋಡ್​, ಶೇರ್​ ಮಾಡಬೇಡಿ. ಬದಲಾಗಿ ಶೇರ್​ ಮಾಡುತ್ತಿರುವ ಪೇಜ್​ಗಳನ್ನು ರಿಪೋರ್ಟ್​ ಮಾಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net