

ಪ್ರಮುಖ ಮುಖ್ಯಾಂಶಗಳು
‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’. ಬಿಗ್‌ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆವಾಗುತ್ತಿದೆ. ಇದೀಗ ‘ರಾಮಾಯಣ’ ತಂಡದ ವಿರುದ್ಧ ನವದೆಹಲಿಯ ರಾಮಲೀಲಾ ಮಹಾಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ‘ರಿಲೀಸ್‌ಗೂ ಮುನ್ನ ಸಂಘದ ಮುಖ್ಯಸ್ಥರಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಬೇಕು’ ಎಂದು ಆಗ್ರಹಿಸಿದೆ. ಇತ್ತೀಚೆಗೆ ಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ‘‘ರಾಮಾಯಣ’ ಸಿನಿಮಾ ಮಾಡುತ್ತಿರುವ ತಂಡಕ್ಕೆ ಅಭಿನಂದಿಸುತ್ತೇವೆ. ಹಾಗೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರ ನೋಡುವಂತೆ ಪ್ರೋತ್ಸಾಹಿಸುತ್ತೇವೆ. ಅಲ್ಲದೇ, ರಾಮಲೀಲಾ ಮಹಾಸಂಘದ ಸದಸ್ಯರಿಗೆ ಉಚಿತ ಶೋ ಏರ್ಪಡಿಸುತ್ತೇವೆ. ಆದರೆ, ಸಿನಿಮಾದ ಕಂಟೆಂಟ್ ಮೇಲೆ ನಮಗೆ ಇನ್ನೂ ಭರವಸೆ ಬಂದಿಲ್ಲ. ಇತ್ತೀಚೆಗೆ ರಿಲೀಸ್ ಮಾಡಲಾಗಿದ್ದ ಟ್ರೇಲರ್ ನಮಗೆ ನೋವು ತರಿಸಿತ್ತು. ಅಲ್ಲಿ ಸೂಕ್ತ ಭಾವನೆಗಳು ಇರಲಿಲ್ಲ. ಜತೆಗೆ ವೇಷಭೂಷಣಗಳು ವಿಚಿತ್ರವಾಗಿರುವುದು ಕಂಡುಬಂತು. ಹೀಗಾಗಿ, ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರತಂಡ ನಮಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕು. ಏನಾದರೂ ಕೊರತೆ ಕಂಡುಬಂದರೆ ನಾವು ಸಲಹೆ ನೀಡಲು ಸಿದ್ಧ. ಈ ಹಿಂದೆ ‘ಆದಿಪುರುಷ್’ ಚಿತ್ರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿನಿಮಾ ತೋರಿಸುವಂತೆ ಕೇಳುತ್ತಿದ್ದೇವೆ. ಆದಾಗ್ಯೂ, ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ದೀಪಾವಳಿಗೆ ‘ರಾಮಾಯಣ ಭಾಗ 1’ ವಿಶ್ವಾದ್ಯಂತ ರಿಲೀಸ್ ಆಗಲಿದೆ. -ಏಜೆನ್ಸೀಸ್