Badshah - Isha Divorce : 3 ಗಂಟು, 7 ಹೆಜ್ಜೆ, 5 ತಿಂಗಳು!

Badshah - Isha Rikhi Divorce
Badshah - Isha Rikhi Divorce
Published on
Badshah - Isha Divorce :
ಈ ವರ್ಷ ಕೆಲ ಹೈ-ಪ್ರೊಫೈಲ್​ ವಿಚ್ಛೇದನಗಳಿಗೆ ಭಾರತೀಯ ಚಿತ್ರರಂಗ ಸಾಕ್ಷಿಯಾಗಿದೆ. ತಮಿಳು ನಾಡು ಸಿಎಂ, ನಟ ಜೋಸೆಫ್​ ವಿಜಯ್​ & ಸಂಗೀತಾ ಸ್ವರ್ಣಲಿಂಗಂ ಜೋಡಿ, ಮಾಹಿ ವಿಜ್​ & ಜೈ ಭಾನುಶಾಲಿ, ಈವ್ಲಿನ್​ ಶರ್ಮಾ & ತುಷಾನ್​ ಭಿಂಡಿ, ಹನ್ಸಿಕಾ ಮೊಟ್ವಾನಿ & ಸುಹೈಲ್​ ಖಟುರಿಯಾ, ಮೌನಿ ರಾಯ್​ & ಸೂರಜ್​ ನಂಬಿಯಾರ್​ ದಂಪತಿ ಈ ವರ್ಷ ವಿಚ್ಛೇದನ ಪಡೆಯುವ ಮೂಲಕ ಸುದ್ದಿಯಾಗಿದ್ದರು. ಎಲ್ಲರೂ ಹಲವು ವರ್ಷ ಸಂಸಾರ ಮಾಡಿ, ಕೊನೆಗೆ ಹೊಂದಾಣಿಕೆಯಾಗದ ಕಾರಣ ಪರಸ್ಪರ ದೂರಾಗಲು ನಿರ್ಧರಿಸಿದ್ದರು. ಆದರೆ, ಇಲ್ಲೊಂದು ತಾರಾ ಜೋಡಿ ಮದುವೆಯಾದ ಐದೇ ತಿಂಗಳಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಹೌದು, ಖ್ಯಾತ ರ್ಯಾಪರ್​, ಸಂಗೀತ ನಿರ್ದೇಶಕ ಬಾದ್ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಕಳೆದ ಮಾರ್ಚ್​ನಲ್ಲಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಕಳೆದ ಒಂದು ತಿಂಗಳಿನಿಂದ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ಇಶಾ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್​ಗಳನ್ನು ಹಾಕಿದ್ದರು. ಇದೀಗ ಸೋಮವಾರ (ಆ. 31) ವಿಚ್ಛೇದನಕ್ಕೆ ಮುಂದಾಗಿರುವ ಬಗ್ಗೆ ಮೊದಲ ಬಾರಿಗೆ ಬಾದ್ಶಾ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. "ನಾನು ಮತ್ತು ಇಶಾ ಪರಸ್ಪರ ದೂರಾಗಿ, ನಮ್ಮ ದಾರಿಗಳಲ್ಲಿ ಸಾಗಲು ನಿರ್ಧರಿಸಿದ್ದೇವೆ. ಇಬ್ಬರೂ ಗೌರವಪೂರಕವಾಗಿ ಒಪ್ಪಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಸಮಯದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಈ ವಿಷಯದ ಬಗ್ಗೆ ಇದೇ ನಮ್ಮ ಹೇಳಿಕೆ. ನಮ್ಮ ಸಂಬಂಧದ ಬಗ್ಗೆ ಇನ್ನು ಯಾವುದೇ ಊಹಾಪೋಹ ಬೇಡ' ಎಂದು ಬಾದ್ಶಾ ಬರೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net