ಶ್ರೀದೇವಿ ನೆನೆದು ಭಾವುಕರಾದ ಪ್ರಿಯಾಂಕಾ ಚೋಪ್ರಾ: ಶೀಘ್ರದಲ್ಲೇ ಬರಲಿದೆ 'ಅತಿಲೋಕ ಸುಂದರಿ'ಯ ಜೀವನಗಾಥೆ! Priyanka Chopra

Priyanka Chopra (ಚಿತ್ರ X)
Priyanka Chopra (ಚಿತ್ರ X)
Published on

Priyanka Chopra:

ಭಾರತೀಯ ಚಿತ್ರರಂಗದ ದಂತಕಥೆ, 'ಅತಿಲೋಕ ಸುಂದರಿ' ಎಂದೇ ಪ್ರಸಿದ್ದರಾಗಿದ್ದ ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಅವರು ಹಿರಿಯ ನಟಿಯನ್ನು ಅತ್ಯಂತ ಗೌರವದಿಂದ ಸ್ಮರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಶ್ರೀದೇವಿ ಅವರ ಜೀವನ ಪಯಣವನ್ನು ಆಧರಿಸಿ ಹೊರಬರುತ್ತಿರುವ ಮುಂಬರುವ ಜೀವನಾಧಾರಿತ ಪುಸ್ತಕದ ಮುಖಪುಟವನ್ನು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಅಧಿಕೃತ ಎಕ್ಸ್​ ಖಾತೆಯ್ಲಲಿ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಧೀರಜ್ ಯು. ಕುಮಾರ್ ಅವರು ಬರೆದಿರುವ ಈ ಕೃತಿಗೆ "ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ ಎಂದು ಹೆಸರಿಡಲಾಗಿದ್ದು, ಪ್ರಸಿದ್ಧ 'ವೆಸ್ಟ್‌ಲ್ಯಾಂಡ್ ಬುಕ್ಸ್' ಸಂಸ್ಥೆಯು ಇದನ್ನು ಪ್ರಕಟಿಸುತ್ತಿದೆ. ಪುಸ್ತಕದ ಮುಖಪುಟವನ್ನು ಪರಿಚಯಿಸಿದ ಪ್ರಿಯಾಂಕಾ ಚೋಪ್ರಾ, ಒಬ್ಬರೇ ಒಬ್ಬರು... ನಿಮ್ಮನ್ನು ನಾವು ತುಂಬಾ ನೆನಪಿಸಿಕೊಳ್ಳುತ್ತಿದ್ದೇವೆ. ಜನ್ಮದಿನದ ಶುಭಾಶಯಗಳು ಶ್ರೀದೇವಿ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಕೃತಿಯ ಮುಖಪುಟದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ವಿಶೇಷ ಸಾಲುಗಳಿದ್ದು, ಅವರು ಶ್ರೀದೇವಿ ಅವರನ್ನು "ಅಪಾರ ಹಾಗೂ ಸಾಟಿಯಿಲ್ಲದ ಪ್ರತಿಭೆಯ ಸಾಕಾರ ರೂಪ" ಎಂದು ಬಣ್ಣಿಸಿದ್ದಾರೆ.
ಶ್ರೀದೇವಿ ಅವರ ಸಿನಿ ಪಯಣವು ಅತ್ಯಂತ ವಿಸ್ಮಯಕಾರಿಯಾದುದು. ಕೇವಲ ನಾಲ್ಕನೇ ವಯಸ್ಸಿನಲ್ಲಿ, ಅಂದರೆ 1967ರ ತಮಿಳು ಚಿತ್ರ 'ಕಂದನ್ ಕರುಣೈ' ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು, 1972ರ 'ರಾಣಿ ಮೇರಾ ನಾಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ತಮ್ಮ ಅದ್ಭುತ ನಟನೆಯಿಂದ ಬಹುಬೇಗನೆ ದೇಶದ ಪ್ರಮುಖ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು. ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು 2013 ರಲ್ಲಿ ಅವರಿಗೆ 'ಪದ್ಮಶ್ರೀ' ನೀಡ ಗೌರವಿಸಿತ್ತು.
1996 ರಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಶ್ರೀದೇವಿ ಅವರಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. 2018 ರಲ್ಲಿ ದುಬೈನಲ್ಲಿ ದುರಂತವಾಗಿ ನಿಧನರಾದ ಈ ದಿಗ್ಗಜ ನಟಿಯ ಬಾಲ್ಯದಿಂದ ಸೂಪರ್‌ಸ್ಟಾರ್ ಆಗಿ ಬೆಳೆದ ಸುದೀರ್ಘ ಪಯಣವನ್ನು ಒಳಗೊಂಡಿರುವ ಈ ಪುಸ್ತಕವು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದ್ದು, ಸಿನಿ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net