“ಯಾರೂ ಈ ಹಾದಿ ಆಯ್ಕೆ ಮಾಡಿಕೊಳ್ಳಬೇಡಿ!”: “ಮಗಳ ಬಳಿ ಹಲವು ಬಾರಿ ಕ್ಷಮೆ ಕೇಳಿದ್ದೇನೆ”: ಸಿಂಗಲ್ ಮದರ್ ಜೀವನದ ಕಹಿ ಸತ್ಯ ಬಿಚ್ಚಿಟ್ಟ ನೀನಾ ಗುಪ್ತಾ! Neena Gupta

ನೀನಾ ಗುಪ್ತಾ ಮತ್ತು ಅವರ ಮಗಳು ಮಸಾಬಾ ಗುಪ್ತಾ ಹಾಗೂ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್
ನೀನಾ ಗುಪ್ತಾ ಮತ್ತು ಅವರ ಮಗಳು ಮಸಾಬಾ ಗುಪ್ತಾ ಹಾಗೂ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್
Published on
ಮುಂಬೈ: ಸಿನಿಮಾರಂಗದಲ್ಲಿ ತಮ್ಮದೇ ಆದ ದಿಟ್ಟತನದಿಂದ ಗುರುತಿಸಿಕೊಂಡಿರುವ ಹಿರಿಯ ನಟಿ ನೀನಾ ಗುಪ್ತಾ (Neena Gupta) ತಮ್ಮ ಬದುಕಿನ ಕಹಿ-ಸಿಹಿ ಅನುಭವಗಳ ಬಗ್ಗೆ ಎಂದಿಗೂ ಮುಕ್ತವಾಗಿ ಮಾತನಾಡುತ್ತಾರೆ. ಅದರಲ್ಲೂ ಒಂಟಿ ತಾಯಿಯಾಗಿ ಮಗಳು ಮಸಾಬಾ ಗುಪ್ತಾರನ್ನು ಬೆಳೆಸಿದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.
ಇದೀಗ ಮತ್ತೊಮ್ಮೆ ಸಿಂಗಲ್ ಮದರ್ ಆಗಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿರುವ ನೀನಾ ಗುಪ್ತಾ, ಅನಿವಾರ್ಯತೆ ಹೊರತು ಯಾರೂ ಈ ಹಾದಿಯನ್ನು ಆರಿಸಿಕೊಳ್ಳಬಾರದು ಎಂದು ಯುವ ಪೀಳಿಗೆಗೆ ಸಲಹೆ ನೀಡಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ನೀನಾ, ಸಿಂಗಲ್ ಮದರ್ ಆಗಿ ಮಗುವನ್ನು ಬೆಳೆಸುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿದ್ದಾರೆ. ನಾನು ಸಿಂಗಲ್ ಮದರ್ ಆಗಿ ಜೀವನ ನಡೆಸಿದೆ ಎಂಬ ಕಾರಣಕ್ಕೆ ಬೇರೆಯವರು ಕೂಡ ಅದೇ ಹಾದಿಯಲ್ಲಿ ಸಾಗಬೇಕು ಎಂದು ನಾನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಇದು ಅತ್ಯಂತ ಕಷ್ಟಕರವಾದ ಹಾದಿ ಮತ್ತು ಮಗುವಿನ ದೃಷ್ಟಿಯಿಂದಲೂ ಇದು ಅಷ್ಟು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾರೂ ಈ ಹಾದಿಯನ್ನು ಆರಿಸಿಕೊಳ್ಳಬೇಡಿ!

ಸಮಾಜದ ಟೀಕೆಗಳಿಗೆ ಹೆದರಿ ತಾವು ಈ ಮಾತುಗಳನ್ನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ನೀನಾ, ಒಬ್ಬಂಟಿ ತಾಯ್ತನದ ನೈಜ ನೋವುಗಳನ್ನು ಹಂಚಿಕೊಂಡಿದ್ದಾರೆ. ಇದು ಸಮಾಜದ ಬಾಯಿಗೆ ಹೆದರಿ ಹೇಳುತ್ತಿರುವುದಲ್ಲ.
ಒಬ್ಬಂಟಿ ತಾಯಿಯಾಗಿ ಬದುಕುವುದು ನಿಮ್ಮ ಶರೀರ, ಆತ್ಮ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಭಾರೀ ದೊಡ್ಡ ಒತ್ತಡವನ್ನುಂಟು ಮಾಡುತ್ತದೆ. ಮಗುವಿಗೂ ಕೂಡ ಅಪ್ಪ-ಅಮ್ಮ ಇಬ್ಬರ ಪ್ರೀತಿ ಸಿಗುವುದು ಬಹಳ ಮುಖ್ಯ. ಹಾಗಾಗಿ ಯಾರೂ ಈ ಕಷ್ಟದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದಿದ್ದಾರೆ. ಆದರೆ ಯಾರಾದರೂ ಸ್ವತಃ ಇಷ್ಟಪಟ್ಟು ಆ ಹಾದಿಯನ್ನು ಆರಿಸಿಕೊಂಡರೆ ಅದು ಅವರವರ ವೈಯಕ್ತಿಕ ಆಯ್ಕೆ ಎಂದು ಅವರು ತಿಳಿಸಿದ್ದಾರೆ.

ಮಸಾಬಾ ಬಳಿ ಕ್ಷಮೆ ಕೇಳಿದ್ದೇಕೆ?

ಮಗಳು ಮಸಾಬಾಳ ಜೊತೆ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡುತ್ತಾ, ತಂದೆಯ ಸಾಮೀಪ್ಯವಿಲ್ಲದೆ ಬೆಳೆದಿದ್ದಕ್ಕಾಗಿ ತಾನು ಮಗಳ ಬಳಿ ಹಲವು ಬಾರಿ ಕ್ಷಮೆ ಯಾಚಿಸಿರುವುದಾಗಿ ನೀನಾ ಗುಪ್ತಾ ಕಣ್ಣೀರಿಟ್ಟಿದ್ದಾರೆ. ನಾನು ಮಗಳ ಜೊತೆ ತುಂಬಾ ಮುಕ್ತವಾಗಿದ್ದೇನೆ. ಬಾಲ್ಯದಲ್ಲಿ ನಿನಗೆ ತಂದೆಯ ಪ್ರೀತಿ ಸಿಗಲಿಲ್ಲವಲ್ಲ ಎಂದು ಹಲವು ಬಾರಿ ಅವಳ ಬಳಿ ಕ್ಷಮೆ ಕೇಳಿದ್ದೇನೆ. ಅದು ನನ್ನ ತಪ್ಪೇ ಆಗಿತ್ತು, ಆದರೆ ಮಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾಳೆ ಎಂದು ಭಾವುಕರಾಗಿದ್ದಾರೆ.
ಅಲ್ಲದೆ, ಹೊರಗಿನವರಿಂದ ಯಾರೂ ಮಸಾಬಾಳ ಬಳಿ ತಂದೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಬಾರದು ಎಂಬ ಕಾರಣಕ್ಕೆ ತಾನೇ ಸ್ವತಃ ಎಲ್ಲ ಸತ್ಯಗಳನ್ನು ಮಗಳಿಗೆ ಹಂತ ಹಂತವಾಗಿ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ಮಸಾಬಾಳಿಗೆ ತನ್ನ ತಂದೆಯ ಬಗ್ಗೆ ಯಾವುದೇ ರೀತಿಯ ದ್ವೇಷ ಅಥವಾ ಕೋಪ ಬಾರದಂತೆ ನೋಡಿಕೊಂಡಿದ್ದೇ ತಮ್ಮ ಜೀವನದ ಅತ್ಯಂತ ವಿವೇಚನೆಯುಳ್ಳ ನಿರ್ಧಾರ ಎಂದು ನೀನಾ ಹೆಮ್ಮೆಯಿಂದ ನುಡಿದಿದ್ದಾರೆ.

ವಿವಿಯನ್ ರಿಚರ್ಡ್ಸ್ ಜೊತೆಗಿನ ಹಳೆಯ ದಿನಗಳು

1980ರ ದಶಕದ ಅಂತ್ಯದಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ನೀನಾ ಗುಪ್ತಾ ಪ್ರೇಮದಲ್ಲಿದ್ದರು. ಆ ಸಂದರ್ಭದಲ್ಲಿ ರಿಚರ್ಡ್ಸ್ ವಿವಾಹಿತರಾಗಿದ್ದರು. ಇವರ ಸಂಬಂಧದ ನಡುವೆಯೇ ನೀನಾ ಗರ್ಭಿಣಿಯಾದರು. ಈ ಬಗ್ಗೆ ತಮ್ಮ 'ಸಚ್ ಕಹೂನ್ ತೋ' ಆತ್ಮಕಥೆಯಲ್ಲಿ ಬರೆದುಕೊಂಡಿರುವ ನೀನಾ, ವಿವಿಯನ್ ಮತ್ತು ನನ್ನ ನಡುವೆ ಸಂಬಂಧವಿತ್ತು, ನಾನು ಗರ್ಭಿಣಿಯಾದೆ.
ಆ ವಿಷಯ ನನಗೆ ತಿಳಿಯುವಷ್ಟರಲ್ಲಿ ಅವರು ತಮ್ಮ ದೇಶಕ್ಕೆ ಮರಳಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಕಷ್ಟದ ಕಾಲದಲ್ಲೂ ಹೆಣ್ಣು ಮಗುವಿಗೆ ಜನ್ಮ ನೀಡಿ, ಯಾರ ಆಸರೆಯೂ ಇಲ್ಲದೆ ಭಾರತದಲ್ಲೇ ಒಂಟಿಯಾಗಿ ಮಸಾಬಾಳನ್ನು ಬೆಳೆಸಿದ್ದೆನೆಂದು ನೀನಾ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net