ಸಿನಿಮಾ ಹಿಟ್​, ಬಳಿಕ ಸಾಲದ ಹೊರೆ, ಕೋಟಿ ಮೌಲ್ಯದ ಆಸ್ತಿ ಮಾರಾಟ: ಬದುಕಿನ ಕರಾಳ ಅಧ್ಯಾಯದ ಬಗ್ಗೆ ಸನ್ನಿ ಓಪನ್​ ಟಾಕ್​! Sunny Deol on his Debt

ಸಾಲದ ಸುಳಿಯಲ್ಲಿ ಸಿಲುಕಿದ್ದ ಸನ್ನಿ ಡಿಯೋಲ್​
ಸಾಲದ ಸುಳಿಯಲ್ಲಿ ಸಿಲುಕಿದ್ದ ಸನ್ನಿ ಡಿಯೋಲ್​
Published on

ಪ್ರಮುಖ ಮುಖ್ಯಾಂಶಗಳು

  • ಸಾಲದ ಸುಳಿಯಲ್ಲಿ ಸಿಲುಕಿದ್ದ ಸನ್ನಿ ಡಿಯೋಲ್​
  • ಜೀವನದ ಕರಾಳ ಅಧ್ಯಾಯದ ಬಗ್ಗೆ ಬಿಚ್ಚಿಟ್ಟ ನಟ
  • ಕೋಟಿ ಕೋಟಿ ಸಾಲ, ಆಸ್ತಿ ಮಾರಾಟ ಹಾಗೂ 'ಗದರ್ 2' ಯಶಸ್ಸಿನ ಹಿಂದಿನ ರೋಚಕ ಕಥೆ
ಮುಂಬೈ: ಬಾಲಿವುಡ್‌ನ ಆಕ್ಷನ್ ಕಿಂಗ್ ಸನ್ನಿ ಡಿಯೋಲ್ ಅಂದ್ರೆ ಯಾರಿಗೆ ಗೊತ್ತಿಲ್ಲ, ತೆರೆ ಮೇಲೆ ರೌಡಿಗಳಿಗೆ ಮನಬಂದಂತೆ ಬಾರಿಸುವುದೇ ಇವರ ವಿಶೇಷ. ಆದರೆ ಈ ನಟನ ನಿಜ ಜೀವನದಲ್ಲಿ ಇಷ್ಟೊಂದು ಕಷ್ಟಗಳು, ಆರ್ಥಿಕ ಬಿಕ್ಕಟ್ಟುಗಳು ಹಾಗೂ ಕಣ್ಣೀರಿನ ಕಥೆ ಇತ್ತು ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸನ್ನಿ ಡಿಯೋಲ್ (Sunny Deol on his Debt), ತಮ್ಮ ವೃತ್ತಿಜೀವನದ ಏಳು-ಬೀಳುಗಳು, ಸಾಲದ ಸುಳಿಗೆ ಸಿಲುಕಿದ್ದು ಮತ್ತು ಗದರ್ 2 ಸಿನಿಮಾ ತಂದ ಭರ್ಜರಿ ಬದಲಾವಣೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

2001ರ ಬ್ಲಾಕ್‌ಬಸ್ಟರ್; ನಂತರ ಶುರುವಾಯ್ತು ಕುಸಿತ!

2001ರಲ್ಲಿ ತೆರೆಕಂಡ ಗದರ್: ಏಕ್ ಪ್ರೇಮ್ ಕಥಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದೆಂಥಾ ಸಂಚಲನ ಸೃಷ್ಟಿಸಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದೇ ವರ್ಷ ಆಮಿರ್ ಖಾನ್ ಅವರ ಲಗಾನ್ ಸಿನಿಮಾ ಕೂಡ ಬಿಡುಗಡೆ ಆಗಿತ್ತು.

ಆದರೆ, ಲಗಾನ್ ಗಳಿಸಿದ್ದಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಗದರ್ ದಾಖಲೆ ಬರೆದಿತ್ತು. ಇದರ ಬೆನ್ನಲ್ಲೇ ಬಂದ ಇಂಡಿಯನ್ ಸಿನಿಮಾವೂ ಸೂಪರ್ ಹಿಟ್ ಆಗಿತ್ತು.

ಆದರೆ, ಈ ಭರ್ಜರಿ ಯಶಸ್ಸಿನ ಬಳಿಕ ಸನ್ನಿ ಡಿಯೋಲ್ ವೃತ್ತಿಜೀವನದಲ್ಲಿ ನಿಧಾನವಾಗಿ ಕುಸಿತ ಶುರುವಾಯಿತು. ಆ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳು ಎಂಟ್ರಿ ಕೊಟ್ಟು, ಇಂಡಸ್ಟ್ರಿಯ ಸ್ವರೂಪವೇ ಬದಲಾಯ್ತು. ಯಾಕೋ ನನಗೆ ಸರಿಯಾದ ಪ್ರಾಜೆಕ್ಟ್‌ಗಳು ಸಿಗಲಿಲ್ಲ ಎಂದು ಸನ್ನಿ ಬೇಸರ ವ್ಯಕ್ತಪಡಿಸಿದ್ದಾರೆ.


ರಾಜಕೀಯ ವಿವಾದದಿಂದ ಕೈತಪ್ಪಿದ ಸಿನಿಮಾ!

2005ರಲ್ಲಿ ಬಂದ ಜೋ ಬೋಲೆ ಸೋ ನಿಹಾಲ್ ಸಿನಿಮಾ ಸಿಖ್ ಸಮುದಾಯದ ಕೆಲವರ ವಿರೋಧವನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲದೆ, ದೆಹಲಿಯ ಸಿನಿಮಾ ಹಾಲ್ ಒಂದರಲ್ಲಿ ಬಾಂಬ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿ, 49 ಜನರು ಗಾಯಗೊಂಡಿದ್ದರು.

ಈ ದುರ್ಘಟನೆಯ ಬಳಿಕ ಸಿನಿಮಾವನ್ನು ಥಿಯೇಟರ್‌ಗಳಿಂದ ಹಿಂದಕ್ಕೆ ಪಡೆಯಬೇಕಾಯಿತು. ನಾವು ಕೇವಲ ಮನರಂಜಕರು, ಸಿನಿಮಾಗಳಲ್ಲಿ ರಾಜಕೀಯ ತರೋದು ಸರಿಯಲ್ಲ ಎಂದು ಸನ್ನಿ ಅಳಲು ತೋಡಿಕೊಂಡಿದ್ದಾರೆ.

ಸಾಲದ ಸುಳಿಗೆ ಸಿಲುಕಿದ ಸನ್ನಿ!

ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಕೈಹಾಕಿದ ಸನ್ನಿ ಡಿಯೋಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. 2016ರಲ್ಲಿ ಅವರು ನಿರ್ದೇಶಿಸಿ, ನಟಿಸಿದ್ದ ಘಾಯಲ್ ವಾನ್ಸ್ ಅಗೇನ್ ಚಿತ್ರದ ನಿರ್ಮಾಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರು.

ಇವರ ನಿರ್ದೇಶನದ ದಿಲ್ಲಿಗಿ, ಘಾಯಲ್ ರಿಟರ್ನ್ಸ್ ಮತ್ತು ಪಾಲ್ ಪಾಲ್ ದಿಲ್ ಕೆ ಪಾಸ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾದವು. ಇದರಿಂದ ಸಾಲದ ಹೊರೆ ಹೆಚ್ಚಾಗಿ, ಮುಂಬೈನ ಜುಹುವಿನಲ್ಲಿರುವ ಅವರ ಒಡೆತನದ ಐಷರಾಮಿ ‘ಸನ್ನಿ ವಿಲ್ಲಾ’ ಮೇಲೆ ಸುಮಾರು 55.99 ಕೋಟಿ ರೂ. ಬಾಕಿ ಉಳಿದಿದ್ದಕ್ಕೆ ಬ್ಯಾಂಕ್ ಹರಾಜು ನೋಟಿಸ್ ಜಾರಿ ಮಾಡಿತ್ತು.


ಆದರೆ, ನಾನು ಯಾರ ಬಳಿಯೂ ಕೈಯೊಡ್ಡಿ ಸಾಲ ಪಡೆದಿರಲಿಲ್ಲ, ಎಲ್ಲವೂ ನನ್ನದೇ ಆದ ಜವಾಬ್ದಾರಿ. ನನ್ನ ಸ್ವಂತ ಆಸ್ತಿಯನ್ನೇ ಮಾರಿ ಆ ಸಾಲ ತೀರಿಸಿದೆ. ನಾನು ಸಾಲದಲ್ಲಿದ್ದಾಗಲೂ ತುಂಬಾ ಖುಷಿಯಾಗಿದ್ದೆ, ನೆಮ್ಮದಿಯಾಗಿ ಬದುಕುತ್ತಿದ್ದೆ ಎಂದು ಸನ್ನಿ ದಿಟ್ಟತನದಿಂದ ಹೇಳಿದ್ದಾರೆ.

ಗದರ್ 2 ಸೃಷ್ಟಿಸಿದ ಬಿಗ್ ಟರ್ನಿಂಗ್ ಪಾಯಿಂಟ್!

ಹಲವು ವರ್ಷಗಳ ಕಷ್ಟದ ಬಳಿಕ 2023ರಲ್ಲಿ ತೆರೆಕಂಡ ‘ಗದರ್ 2’ ಸಿನಿಮಾ ಸನ್ನಿ ಡಿಯೋಲ್ ವೃತ್ತಿಜೀವನಕ್ಕೆ ಹೊಸ ಜೀವ ತುಂಬಿತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಸನ್ನಿಯನ್ನು ಮತ್ತೆ ನಂ.1 ಸ್ಥಾನಕ್ಕೆ ತಂದು ನಿಲ್ಲಿಸಿತು.
ಇದರ ಯಶಸ್ಸಿನ ಬಳಿಕ ಸಾಲು ಸಾಲು ಸಿನಿಮಾಗಳ ಆಫರ್‌ಗಳು ಹುಡುಕಿ ಬಂದವು. ನಿರ್ಮಾಪಕ ರಾಜಕುಮಾರ್ ಸಂತೋಷಿ ಜೊತೆಗಿನ ಮೂರು ದಶಕಗಳ ನಂಟು ಮರುಕಳಿಸಿ, ಆಮಿರ್ ಖಾನ್ ಬೆಂಬಲದೊಂದಿಗೆ ಬಟ್ವಾರಾ 1947 ಸಿನಿಮಾ ಕೂಡ ತೆರೆಕಂಡಿದೆ. ಒಟ್ಟಿನಲ್ಲಿ, ಎಷ್ಟೇ ಕಷ್ಟ-ನಷ್ಟಗಳು ಬಂದರೂ ಕುಗ್ಗದೆ, ಧೈರ್ಯವಾಗಿ ಎದುರಿಸಿ ಮತ್ತೆ ಮುನ್ನಡೆಯುತ್ತಿರುವ ಸನ್ನಿ ಡಿಯೋಲ್ ಅವರ ಈ ಕಥೆ ನಿಜಕ್ಕೂ ಎಲ್ಲರಿಗೂ ಒಂದು ದೊಡ್ಡ ಸ್ಪೂರ್ತಿ ಎನ್ನಬಹುದಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net