ಎಲ್ಲ ಭಾಷೆಗಳ ಸ್ಟಾರ್ ನಟರು ಕೂಡ ಈಗ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಹೀಗಾಗಿಯೇ ಬೇರೆ ಬೇರೆ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಎಲ್ಲೆಡೆ ಸಲ್ಲುವ ಮೂಲಕ ಮಾರ್ಕೆಟ್ ವಿಸ್ತರಿಸಿಕೊಳ್ಳುವ ಐಡಿಯಾ ಅವರದು. ಅದರಂತೆ ಮಾಲಿವುಡ್ ನಟ ಮೋಹನ್ ಲಾಲ್ ಮತ್ತು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಒಟ್ಟಿಗೆ ನಟಿಸಬೇಕಿತ್ತು. "2018', "ತುಡಕ್ಕುಮ್' ಖ್ಯಾತಿಯ ಜೂಡ್ ಆ್ಯಂಟನಿ ಜೋಸೆಫ್ ನಿರ್ದೇಶನದಲ್ಲಿ, ಬಾಲಿವುಡ್ ನಿರ್ಮಾಣ ಸಂಸ್ಥೆ ಈ ಸಿನಿಮಾ ನಿರ್ಮಿಸಬೇಕಿತ್ತು. ಆದರೆ, ಘೋಷಣೆಗೂ ಮುನ್ನವೇ ಚಿತ್ರ ಸ್ಥಗಿತಗೊಂಡಿದೆ. ಮೋಹನ್ ಲಾಲ್ ಪಾತ್ರಕ್ಕೆ ಕತ್ತರಿ ಹಾಕಲು ಆಯುಷ್ಮಾನ್ ತಿಳಿಸಿದ್ದೇ ಅದಕ್ಕೆ ಕಾರಣ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಜೂಡ್, "ಕಥೆ ಕೇಳಿ ಆಯುಷ್ಮಾನ್ ತುಂಬ ಖುಷಿ ಪಟ್ಟಿದ್ದರು. ಆದರೆ, ದುರಾದೃಷ್ಟವಶಾತ್ ಈ ಸಿನಿಮಾ ಆಗುತ್ತಿಲ್ಲ. ಹಾಗಂತ ಅದಕ್ಕೆ ಅವರು ಕಾರಣರಲ್ಲ' ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಆಯುಷ್ಮಾನ್, "ಜೂಡ್ ನಾನು ನಿಮ್ಮ ಸಿನಿಮಾಗಳ ಅಭಿಮಾನಿ. ನಿಮ್ಮ ಜತೆ ಕೆಲಸ ಮಾಡುವ ಅವಕಾಶ ಆದಷ್ಟು ಬೇಗ ಸಿಗಲಿ ಎಂದು ಆಶಿಸುವೆ. ಮೋಹನ್ ಲಾಲ್ ಸರ್ ಒಬ್ಬ ಲೆಜೆಂಡ್. ಒಂದಲ್ಲ ಒಂದು ದಿನ ಅವರ ಜತೆ ತೆರೆ ಹಂಚಿಕೊಳ್ಳುವಷ್ಟು ಅರ್ಹನಾಗುವ ಭರವಸೆ ನನಗಿದೆ' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ಬಾಲಿವುಡ್ ನಿರ್ಮಾಣ ಸಂಸ್ಥೆ ಮೋಹನ್ ಲಾಲ್ ಪಾತ್ರವನ್ನು ಕಡಿಮೆ ಮಾಡಲು ಜೂಡ್ಗೆ ತಿಳಿಸಿತ್ತಂತೆ. ಆದರೆ, ನಿರ್ದೇಶಕ ಅದಕ್ಕೊಪ್ಪದ ಕಾರಣ ಸಿನಿಮಾ ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.