_1787411727492.webp?w=480&auto=format%2Ccompress&fit=max)
_1787411727492.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜೀವನ ಹಾಗೂ ಅವರು ಪ್ರಚುರಪಡಿಸಿದ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಹಲವು ಸಿನಿಮಾಗಳು ಮೂಡಿಬಂದಿವೆ. ‘ಗಾಂಧಿ’, ‘ದ ಮೇಕಿಂಗ್ ಆಫ್ ಮಹಾತ್ಮ’, ‘ಲಗೇ ರಹೋ ಮುನ್ನಾಭಾಯ್’, ಕನ್ನಡದ ‘ಕೂರ್ಮಾವತಾರ’ ಸೇರಿ ಹಲವು ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ. ಇದೀಗ ಹಿಂದಿಯಲ್ಲಿ ಮತ್ತೊಮ್ಮೆ ಗಾಂಧಿ ವಿಷಯಾಧಾರಿತ ಸಿನಿಮಾ ಮೂಡಿಬರುತ್ತಿದೆ. ‘ಚಮೇಲಿ’ ಖ್ಯಾತಿಯ ನಿರ್ದೇಶಕ ಸುಧೀರ್ ಮಿಶ್ರಾ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಅನುಭವ್ ಸಿನ್ಹಾ ಬಂಡವಾಳ ಹೂಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೈ ಗಾಂಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರು ಇದೇ ಮೊದಲ ಬಾರಿಗೆ ಐತಿಹಾಸಿಕ ವ್ಯಕ್ತಿಯ ಪಾತ್ರದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಕಥೆ ಸಾಗಲಿದ್ದು, ಆ ವೇಳೆ ಗಾಂಧಿಯ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಸಿನಿಮಾ ಕುರಿತು ಸುಧೀರ್ ಮಿಶ್ರಾ ಮಾಹಿತಿ ನೀಡಿದ್ದು, ‘ಇತಿಹಾಸದ ಪ್ರಮುಖ ಅಧ್ಯಾಯದ ಮೇಲೆ ಈ ಸಿನಿಮಾ ಮೂಡಿಬರಲಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಧಾರ್ಮಿಕ ಸಾಮರಸ್ಯಕ್ಕಾಗಿ ಗಾಂಧಿ 21 ದಿನಗಳ ಕಾಲ ಉಪವಾಸ ಕುಳಿತಿದ್ದ ಐತಿಹಾಸಿಕ ಘಟನೆ ಕುರಿತು ಬೆಳಕು ಚೆಲ್ಲಲಾಗಿದೆ. ದೇಶವು ಸ್ವಾತಂತ್ರ್ಯದತ್ತ ಹೆಜ್ಜೆ ಹಾಕುತ್ತಿರುವಾಗ ರಾಜಕೀಯ ಅಧಿಕಾರದ ಕೇಂದ್ರವಾಗಿದ್ದ ದೆಹಲಿಯಲ್ಲಿ ಮಹತ್ವದ ಬದಲಾವಣೆ ನಡೆಯುತ್ತದೆ. ಆ ಬದಲಾವಣೆ ಬಳಿಕ ಬೆಳವಣಿಗೆಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ. ಮನೋಜ್ ಬಾಜಪೈ ಜತೆ ಸೌರಭ್ ಶುಕ್ಲಾ ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್