ಚಿತ್ರತಂಡಗಳು ಎಷ್ಟೇ ಮುಂಜಾಗ್ರತೆ ವಹಿಸಿದರೂ, ಎತ್ತರವಾದ ಗೋಡೆ ಕಟ್ಟಿ ಶೂಟಿಂಗ್ ಮಾಡುತ್ತಿದ್ದರೂ ಚಿತ್ರೀಕರಣದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿರುವುದು ಕಡಿಮೆಯಾಗಿಲ್ಲ. ಕೆಲ ತಿಂಗಳ ಹಿಂದೆ ‘ಟಾಕ್ಸಿಕ್’, ‘ರಾಮಾಯಣ’, ‘ಫೌಜಿ’, ‘ಲವ್ ಆ್ಯಂಡ್ ವಾರ್’ ಚಿತ್ರಗಳ ಶೂಟಿಂಗ್ ಸಮಯದ ಫೋಟೋ ಮತ್ತು ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಬಳಿಕ ಚಿತ್ರತಂಡಗಳು ಮತ್ತಷ್ಟು ಮುಂಜಾಗ್ರತೆ ವಹಿಸಿದ್ದವು. ಆದರೆ, ಏನೇ ಕ್ರಮ ವಹಿಸಿದರೂ, ಈ ಕಾಣದ ಕೈಗಳಿಗೆ ಕಡಿವಾಣ ಹಾಕಲಾಗುತ್ತಿಲ್ಲ. ಏಕೆಂದರೆ, ಇದೀಗ ಬಾಲಿವುಡ್‌ನ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ ಮಹತ್ವದ ಸನ್ನಿವೇಶವೊಂದರ ಚಿತ್ರೀಕರಣದ ವಿಡಿಯೋಗಳು ವೈರಲ್ ಆಗಿದೆ. ಒಂದೇ ವಾರದಲ್ಲಿ ಮೂರನೇ ಬಾರಿಗೆ ಚಿತ್ರದ ಶೂಟಿಂಗ್ ವಿಡಿಯೋ ಲೀಕ್ ಆಗಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ‘ಕಿಂಗ್’ನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಜೋಡಿ ಕೈ ಕೈ ಹಿಡಿದುಕೊಂಡು ಬರುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊದಲ ಬಾರಿ ಲೀಕ್ ಆದಾಗಲೇ ಎಚ್ಚೆತ್ತುಕೊಂಡ ನಿರ್ದೇಶಕ ಸಿದ್ಧಾರ್ಥ್ ಆನಂದ್ ವೈರಲ್ ಮಾಡದಂತೆ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದರು. ಆದರೂ, ಮರುದಿನವೇ ಶಾರುಖ್‌ರನ್ನು ಒಳಗೊಂಡ ಆ್ಯಕ್ಷನ್ ದೃಶ್ಯ ವೈರಲ್ ಆಗಿತ್ತು. ಮುಖ್ಯ ದೃಶ್ಯಗಳು ಲೀಕ್ ಆಗುತ್ತಿರುವ ಬಗ್ಗೆ ಎಚ್ಚರ ವಹಿಸಲು ಮುಂದಾಗುತ್ತಿರುವಾಗಲೇ ಇದೀಗ ಚಿತ್ರದ ಮತ್ತೊಂದು ಹಾಡಿನ ದೃಶ್ಯದ ವಿಡಿಯೋ ವೈರಲ್ ಆಗಿದೆ. ಸದ್ಯ ‘ಕಿಂಗ್’ ತಂಡ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸಮುದ್ರ ದಡದಲ್ಲಿ ಶಾರುಖ್-ದೀಪಿಕಾ ನಡುವಿನ ರೊಮ್ಯಾಂಟಿಕ್ ಸನ್ನಿವೇಶ ಮತ್ತು ಕಾರಿನ ಮುಂದೆ ನಿಂತು ಶಾರುಖ್ ಪೋಸ್ ಕೊಡುತ್ತಿರುವ ಎರಡು ದೃಶ್ಯಗಳು ಲೀಕ್ ಆಗಿವೆ. ಹೀಗೆ ಪದೇ ಪದೆ ಚಿತ್ರದ ಶೂಟಿಂಗ್ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿರುವುದರನ್ನು ಗಂಭೀರವಾಗಿ ಪರಿಗಣಿಸಿರುವ ತಂಡ, ಮತ್ತಷ್ಟು ಎಚ್ಚರಿಕೆ ವಹಿಸಲು ಸಿದ್ಧತೆ ನಡೆಸಿದೆ. ಅಂದಹಾಗೆ, ಇದೇ ಡಿ.24ಕ್ಕೆ ‘ಕಿಂಗ್’ ತೆರೆ ಮೇಲೆ ಬರಲಿದೆ. -ಏಜೆನ್ಸೀಸ್