ಬೆಳ್ಳಿತೆರೆಗೆ ಮರಳಿದ ಸಾಗರಿಕಾ: 9 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪತ್ನಿ

ಸಾಗರಿಕಾ ಘಟ್ಗೆ
ಸಾಗರಿಕಾ ಘಟ್ಗೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಲ್ಲಿ ನೆಲೆಯೂರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಾಗರಿಕಾ
  • ಹಿಂದಿಯ ಇರಾದಾ ಚಿತ್ರವೇ ನಟಿ ಅಭಿನಯದ ಕೊನೆಯ ಸಿನಿಮಾ
  • 9 ವರ್ಷಗಳ ಬಳಿಕ ಇದೀಗ ಬೆಳ್ಳಿತೆರೆಗೆ ವಾಪಸ್ಸಾದ ಚಕ್ ದೇ ಇಂಡಿಯಾ ನಟಿ

‘ಚಕ್ ದೇ ಇಂಡಿಯಾ’ ಖ್ಯಾತಿಯ ಸಾಗರಿಕಾ ಘಟ್ಗೆ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಚಕ್ ದೇ ಇಂಡಿಯಾ’ ಬಳಿಕ ಹಿಂದಿಯ ‘ಫಾಕ್ಸ್’, ‘ಮಿಲೇ ನಾ ಮಿಲೇ ಹಮ್’, ‘ರಶ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಇನ್ನೇನು ನೆಲೆಯೂರಬೇಕು ಎನ್ನುತ್ತಿರುವಾಗಲೇ ಸಾಗರಿಕಾ ಕ್ರಿಕೆಟಿಗ ಜಹೀರ್ ಖಾನ್ ಜತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬಣ್ಣದ ಲೋಕದಿಂದ ಅಂತರ ಕಾಪಾಡಿಕೊಂಡರು. ಹಿಂದಿಯ ‘ಇರಾದಾ’ (2017) ಅವರು ನಟಿಸಿದ್ದ ಕೊನೆಯ ಸಿನಿಮಾ. ನಂತರ ಕುಟುಂಬ ನಿರ್ವಹಣೆಯಲ್ಲಿ ಅವರು ಬಿಜಿಯಾದರು. ಆ ನಡುವೆ ಕಿರುತೆರೆಯಲ್ಲಿ ಕೆಲ ಕಾಲ ಕಾಣಿಸಿಕೊಂಡರೂ, ಬಿಗ್‌ಸ್ಕ್ರೀನ್‌ಗೆ ಮರಳಿರಲಿಲ್ಲ. ಇದೀಗ 9 ವರ್ಷಗಳ ಬಳಿಕ ಸಾಗರಿಕಾ ಬಿಗ್‌ಸ್ಕ್ರೀನ್‌ಗೆ ಮರಳುತ್ತಿದ್ದಾರೆ. ಅದು ಸಲ್ಮಾನ್ ಖಾನ್ ಅಭಿನಯದ ಸಿನಿಮಾ ಮೂಲಕ ಎನ್ನುವುದು ವಿಶೇಷ. ತೆಲುಗು ನಿರ್ದೇಶಕ ವಂಶಿ ಪೈಡಿಪಳ್ಳಿ ಮತ್ತು ಸಲ್ಮಾನ್ ಕಾಂಬಿನೇಷನ್‌ನಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಸಿನಿಮಾ ಸೆಟ್ಟೇರಿದ್ದು, ಸದ್ಯ ಶೂಟಿಂಗ್ ನಡೆಯುತ್ತಿದೆ. ಇಲ್ಲಿ ಸಲ್ಮಾನ್‌ಗೆ ನಯನತಾರಾ ಜೋಡಿಯಾಗಿದ್ದಾರೆ. ಇದೀಗ ಚಿತ್ರತಂಡವನ್ನು ಸಾಗರಿಕಾ ಘಟ್ಗೆ ಸೇರಿಕೊಂಡಿದ್ದಾರೆ. ಪಾತ್ರದ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕು. ಮುಂಬೈನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಸಾಗರಿಕಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾ ಜತೆಗೆ ಸಾಗರಿಕಾ ಇನ್ನೊಂದು ಚಿತ್ರವನ್ನೂ ಸೈನ್ ಮಾಡಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net