

ಪ್ರಮುಖ ಮುಖ್ಯಾಂಶಗಳು
ಕಳೆದ ವರ್ಷ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ಕೈಗೊಂಡಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಕುರಿತಂತೆ ಈಗಾಗಲೇ ಹಿಂದಿಯಲ್ಲಿ ಸಿನಿಮಾ ಘೋಷಣೆಯಾಗಿದೆ. ‘ದ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ರಂಜನ್ ಅಗ್ನಿಹೋತ್ರಿ ಕೆಲ ತಿಂಗಳ ಹಿಂದೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ‘ಟೈನಿ’ ಧಿಲ್ಲಾನ್ ರಚಿಸಿರುವ ‘ಆಪರೇಷನ್ ಸಿಂಧೂರ್: ದ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟೈಕ್ಸ್ ಇನ್‌ಸೈಡ್ ಪಾಕಿಸ್ತಾನ್’ ಕೃತಿಯಾಧಾರಿಸಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದ ಸಿದ್ಧತೆಗಳು ನಡೆಯುತ್ತಿರುವಾಗಲೇ ಡಿಸ್ಕವರಿ ಸಂಸ್ಥೆಯು ಇದೇ ಕಾರ್ಯಾಚರಣೆ ಮೇಲೆ ಸಾಕ್ಷ್ಯಚಿತ್ರ ಮಾಡಿರುವುದಾಗಿ ಅನೌನ್ಸ್ ಮಾಡಿದೆ. ಶುಕ್ರವಾರ ಘೋಷಣೆಯಾಗಿದ್ದು, ಎರಡು ಭಾಗದಲ್ಲಿ ಮೂಡಿಬರುವ ಈ ಸಾಕ್ಷ್ಯಚಿತ್ರಕ್ಕೆ ‘ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ಉಗ್ರರ ದಾಳಿಯ ಬಳಿಕ ದೇಶದ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೇನಾಧಿಕಾರಿಗಳು, ಸೈನಿಕರ ಅಭಿಪ್ರಾಯಗಳ ಜತೆಗೆ ಕಾರ್ಯಾಚರಣೆ ಹಿಂದಿನ ಯೋಜನೆ, ಸೇನಾ ತಂತ್ರಗಾರಿಕೆ ಮತ್ತು ಪ್ರಮುಖ ನಿರ್ಧಾರಗಳ ಮೇಲೆ ಸಾಕ್ಷ್ಯಚಿತ್ರ ಬೆಳಕು ಚೆಲ್ಲಲಿದೆ. ಸದ್ಯ ಡಿಸ್ಕವರಿ ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ, ಜನರಲ್ ಅನಿಲ್ ಚೌವಾಣ್, ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ, ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಸೇರಿ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಕಾಣಬಹುದು. ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾತ್ರಿ 9ರಿಂದ 11 ಗಂಟೆಯವರೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಈ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. ‘ಭಾರತದ ಮೂರು ಪ್ರಮುಖ ಸಶಸಪಡೆಗಳ ಪ್ರತಿನಿಧಿಗಳು, ಕಾರ್ಯಾಚರಣೆಯಲ್ಲಿ ಭಾಗಿಯಾದದವರ ಅನುಭವ ಹಾಗೂ ಯೋಜನೆಗಳನ್ನು ನಿಮ್ಮ ಮುಂದಿಡುತ್ತಿರುವುದಕ್ಕೆ ಹೆಮ್ಮೆಯಿದೆ. ಇಂತಹ ದೊಡ್ಡ ಅವಕಾಶ ನಿರ್ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಸಂಬಂಧಿಸಿದಂತೆ ಗಂಭೀರ, ಸೂಕ್ಷ ಹಾಗೂ ನೈಜತೆಯಿಂದ ಈ ಕೆಲಸ ಮಾಡಿದ್ದೇವೆ’ ಎಂದು ನಿರ್ಮಾಣ ಸಂಸ್ಥೆಯ ಅಭಿಷೇಕ್ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್
ಶತ್ರುಗಳ ಮೇಲೆ ಪ್ರತೀಕಾರ