

ಪ್ರಮುಖ ಮುಖ್ಯಾಂಶಗಳು
ಸಾಮಾನ್ಯವಾಗಿ ನಾಟಕಗಳಲ್ಲಿ ಒಬ್ಬರು ಹಲವು ಪಾತ್ರಗಳನ್ನು ಮಾಡಿರುವುದನ್ನು ಕೇಳಿರುತ್ತೇವೆ. ಸಿನಿಮಾದಲ್ಲಿ ವಿರಳ. ಆದರೆ, ಇದೀಗ ಅದು ಕೂಡ ಸಾಧ್ಯವಾಗುತ್ತಿದೆ. ಬಹುನಿರೀಕ್ಷಿತ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಚಿತ್ರದಲ್ಲಿ ಹಿಂದಿ ನಟ ಚೇತನ್ ಹನ್ಸರಾಜ್ ಕಲಾಬಳಗದಲ್ಲಿದ್ದು, ರಿಲೀಸ್ ಮಾಡಿರುವ ಟ್ರೇಲರ್‌ನಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದಲ್ಲಿ ಅವರ ಬಗೆಗಿನ ಆಸಕ್ತಿ ವಿಚಾರವೊಂದು ಹೊರಬಿದ್ದಿದ್ದು, ಒಟ್ಟು ಏಳು ಪಾತ್ರಗಳಲ್ಲಿ ಚೇತನ್ ಹನ್ಸರಾಜ್ ಕಾಣಿಸಿಕೊಂಡಿದ್ದಾರೆ. ಆ ವಿಚಾರವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ‘ನಾನು ‘ರಾಮಾಯಣ’ದಲ್ಲಿ ರಾವಣನ (ಯಶ್)ಅಜ್ಜ ರಾಜ ಮಾಲಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ರಾಜ ಮಾಲಿ ಇತಿಹಾಸದಲ್ಲಿ ಉಳಿಯುವಂತಹ ಪಾತ್ರವಾಗಿದೆ. ಬಹುತೇಕ ನನ್ನ ದೃಶ್ಯಗಳು ಯಶ್ ಜತೆಗಿದ್ದು, ಅವರ ಜತೆ ನಟಿಸಿರುವುದು ಅದ್ಭುತ ಅನುಭವ .ರಾಜ ಮಾಲಿ ಪಾತ್ರದ ಶೂಟಿಂಗ್ ಮುಗಿದ ಬಳಿಕ ಅದೇ ಚಿತ್ರದಲ್ಲಿ ಮತ್ತೆ ಆರು ಪಾತ್ರಗಳಿಗೆ ಅವಕಾಶ ಬಂದವು. ರಾವಣನ ಸಹೋದರನ ಪೈಕಿ ಒಂದು ಪಾತ್ರ, ರಾಕ್ಷಸ ಸೇರಿ ಹೀಗೆ ಒಟ್ಟು ನಾನು ಏಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಬಹಿರಂಗಪಡಿಸಿದ್ದಾರೆ. ಹಿಂದಿಯ ‘ಬಾಡಿಗಾರ್ಡ್’, ‘ಶೂಟ್‌ಔಟ್ ವಡಾಲಾ’, ‘ಬಿಗ್‌ಬ್ರದರ್’ ಸೇರಿ ಹಲವು ಸಿನಿಮಾಗಳಲ್ಲಿ ಚೇತನ್ ಹನ್ಸರಾಜ್ ಅಭಿನಯಿಸಿದ್ದಾರೆ. -ಏಜೆನ್ಸೀಸ್