ಮುಂಬೈ: ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಕಮಲ್ ಹಾಸನ್, ವಿಜಯ್, ಸೂರ್ಯ ಮತ್ತು ಅಮೀರ್ ಖಾನ್ ಅವರಂತಹ ಬಿಗ್ ಸ್ಟಾರ್ ನಟರೊಂದಿಗೆ ಹಲವಾರು ಸೂಪರ್ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಅಸಿನ್ ತೊಟ್ಟುಂಗಲ್, ಕೇವಲ ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತುಂಗದಲ್ಲೇ ಚಿತ್ರರಂಗಕ್ಕೆ ಗುಡ್ಬೈ ಹೇಳಿದ ಈ ಬ್ಯೂಟಿ, ಇಂದು ದಾಂಪತ್ಯ ಜೀವನದಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ, ಅತಿ ಕಿರಿಯ ವಯಸ್ಸಿಗೆ ನಟಿಯ ಪುತ್ರಿಗಿರುವ ಕೆಲವು ವಿಶೇಷ ಪ್ರತಿಭೆ ಅನೇಕರ ಗಮನವನ್ನು ಸೆಳೆದಿದೆ.
ಸಾಲು ಸಾಲು ಬ್ಲಾಕ್ಬಸ್ಟರ್ ಸಿನಿಮಾಗಳನ್ನೇ ನೀಡುತ್ತಿದ್ದ ಆಸಿನ್, 2016ರಲ್ಲಿ ಮೈಕ್ರೋಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ಮದುವೆಯಾದರು. ಬಳಿಕ ಚಿತ್ರೋದ್ಯಮಕ್ಕೆ ಕಂಪ್ಲೀಟ್ ಆಗಿ ಗುಡ್ಬೈ ಹೇಳಿದವರು, ಇಂದಿಗೂ ಯಾವುದೇ ಕಾರ್ಯಕ್ರಮವಾಗಲಿ ಅಥವಾ ಸಂದರ್ಶನಗಳಲ್ಲಿ ಆಗಲಿ ಕಾಣಿಸಿಕೊಂಡಿಲ್ಲ. ಮಾಧ್ಯಮ ಮುಂದೆ ಹಾಜರಾಗದ ಅಸಿನ್, ಇವತ್ತಿಗೆ 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಪತಿ ರಾಹುಲ್ ಶರ್ಮಾ ಜತೆ ಮಗಳನ್ನು ಮುದ್ದಾಗಿ ಬೆಳೆಸುತ್ತಿರುವ ಆಸಿನ್, ತಮ್ಮ ಏಳು ವರ್ಷದ ಪುತ್ರಿ ಆರಿನ್ ರೈನ್ ಶರ್ಮಾ ಅವರ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಾರೆ. ಕಾರಣ, ಇಷ್ಟು ಚಿಕ್ಕ ವಯಸ್ಸಿಗೆ ಮಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 12 ಭಾಷೆಗಳನ್ನು ಮಾತನಾಡಲು ಕಲಿತ್ತಿದ್ದಾರೆ. ವಿಶೇಷ ಎಂದರೆ, ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳೂ ಸಹ ಗಂಟೆಗಟ್ಟಲೆ ಮೊಬೈಲ್ ಸ್ಕ್ರೀನ್, ಟಿವಿ ಮುಂದೆ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ, ಆಸಿನ್ ಮನೆಯಲ್ಲಿ ಮಗಳು ಆರಿನ್ಗಾಗಿ ಸಂಪೂರ್ಣ ಸ್ಕ್ರೀನ್ ಮುಕ್ತ ವಾತಾವರಣ ನಿರ್ಮಿಸಿರುವುದು ಗಮನಾರ್ಹ.
ಪುತ್ರಿಗೆ ಎಲ್ಲ ಮಕ್ಕಳಂತೆ ಹೆಚ್ಚು ಸ್ಕ್ರೀನ್ ಟೈಮ್ ಕೊಟ್ಟಿಲ್ಲವಂತೆ. ಟಿವಿ ಮತ್ತು ಸ್ಮಾರ್ಟ್ಫೋನ್ಗಳಿಂದ ಆದಷ್ಟು ಮಗಳನ್ನು ದೂರವಿಟ್ಟಿದ್ದೇವೆ. ಇದರ ಬದಲಿಗೆ, ಆಕೆ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾಳೆ. ಅವಳಿಗೆ ಪುಸ್ತಕವೇ ಪ್ರಪಂಚ. ಆರಿನ್ ಓದುವ ಶಾಲೆಗಿಂತಲೂ ನಮ್ಮ ಮನೆಯಲ್ಲೇ ಹೆಚ್ಚು ಪುಸ್ತಕಗಳಿವೆ. ಅವಳು ಎರಡನೇ ತರಗತಿಯಲ್ಲಿದ್ದಾಗ, ನಮ್ಮಲ್ಲಿ 8 ಮತ್ತು 9ನೇ ತರಗತಿಯ ಪುಸ್ತಕಗಳಿದ್ದವು. ನಾನು ಆಗ ತಮಾಷೆ ಮಾಡುತ್ತಿದ್ದೆ. ಆದರೆ, ಅವಳು 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಕುಳಿತರೆ ಹೇಗೆ ಎಂಬ ಚಿಂತೆಯೂ ನನಗೆ ಕಾಡಿದೆ ಎಂದು ಸ್ವತಃ ರಾಹುಲ್ ಶರ್ಮಾ ಹೇಳಿಕೊಂಡಿದ್ದಾರೆ.
ಕೊರಿಯನ್, ಜಪಾನೀಸ್...
ಕೇವಲ ಏಳು ವರ್ಷ ವಯಸ್ಸಿನ ಆರಿನ್, ಕೊರಿಯನ್, ಜಪಾನೀಸ್, ಥಾಯ್ ಮತ್ತು ಚೈನೀಸ್ ಸೇರಿದಂತೆ 12 ಭಾಷೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಮಾತನಾಡುತ್ತಾರೆ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ. ನನಗೆ ಸರಿಯಾಗಿ ಎರಡು ಭಾಷೆಗಳನ್ನು ಮಾತನಾಡಲು ಕಷ್ಟವಾಗುತ್ತದೆ. ನಾವು ಇಂಗ್ಲಿಷ್ ಮತ್ತು ಹಿಂದಿಗೆ ಮಾತ್ರ ಓಕೆ ಆಗಿದ್ದೀವಿ. ಆದರೆ, ಮಗಳು ಮಾತ್ರ ಹಲವು ಭಾಷೆಗಳನ್ನು ನೀರು ಕುಡಿದಷ್ಟೇ ಸಲಿಸಾಗಿ ಅರ್ಥ ಮಾಡಿಕೊಳ್ಳುತ್ತಾಳೆ ಮತ್ತು ವ್ಯವಹರಿಸುತ್ತಾಳೆ. ಇದಕ್ಕೆಲ್ಲ, ಅಸಿನ್ ಅವರ ತಾಳ್ಮೆ ಮತ್ತು ಮಗಳಿಗಾಗಿ ಅವರು ಕೊಡುತ್ತಿರುವ ಸಮಯ' ಎಂದು ಹೇಳಿದ್ದಾರೆ.
'ಅಸಿನ್ ಜತೆ ಮದುವೆ ಆಗಿದ್ದು ನನ್ನ ಜೀವನದಲ್ಲಿ ನಡೆದಿರುವ ಉತ್ತಮ ಸಂಗತಿ. ನನ್ನ ಎಲ್ಲ ದೊಡ್ಡ ನಿರ್ಧಾರಗಳ ಹಿಂದಿನ ಶಕ್ತಿ ಅವಳು. ವ್ಯಾಪಾರ ಮತ್ತು ಜೀವನದಲ್ಲಿ ಬಿಕ್ಕಟ್ಟು ಎದುರಾದಾಗಲೆಲ್ಲ ಭಯವಿಲ್ಲ, ಮುಂದೆ ಸಾಗಿ ಎಂದು ಧೈರ್ಯ ತುಂಬುತ್ತಾರೆ. ನನ್ನ ಜೀವನದಲ್ಲಿ ಅಸಿನ್ ನಿರ್ವಹಿಸುವ ಪಾತ್ರ ಪದಗಳಿಗೂ ಮೀರಿದ್ದು' ಎಂದು ರಾಹುಲ್ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಸಿನ್ ಕೊನೆಯದಾಗಿ ನಟಿಸಿದ್ದು 2015ರಲ್ಲಿ ರಿಲೀಸ್ ಆದ 'ಆಲ್ ಈಸ್ ವೆಲ್' ಚಿತ್ರದಲ್ಲಿ,(ಏಜೆನ್ಸೀಸ್).