Drug Case - ಡ್ರಗ್​ ಪೆಡ್ಲಿಂಗ್ ಆರೋಪ, ಪೊಲೀಸರ ಬಲೆಗೆ ಬಿದ್ದ ನಟ

Rohullah Mehdi
Rohullah Mehdi
Published on
Rohullah Mehdi -
ಮಾದಕ ವ್ಯಸನ ಮತ್ತು ಡ್ರಗ್​ ಪೆಡ್ಲಿಂಗ್​ ಪ್ರಕರಣಗಳು ಎಲ್ಲ ಚಿತ್ರರಂಗಗಳನ್ನೂ ಬೆಂಬಿಡದೆ ಕಾಡುತ್ತಿವೆ. ಕೆಲ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲೂ ಡ್ರಗ್ಸ್​ ಕೇಸ್​ ಸದ್ದು ಮಾಡಿತ್ತು. ಟಾಲಿವುಡ್​ನಲ್ಲಿ ಅಪರೂಪಕ್ಕೊಮ್ಮೆ ಇಂತಹ ಪ್ರಕರಣಗಳು ಸುದ್ದಿಯಾಗುತ್ತಿರುತ್ತವೆ. ಇನ್ನು ಮಾಲಿವುಡ್​ನಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ನಟ, ನಟಿಯರ ವಿರುದ್ಧ ಡ್ರಗ್ಸ್​ ಸೇವನೆ ಪ್ರಕರಣಗಳು ಸಾಲಾಗಿ ದಾಖಲಾಗಿವೆ. ಬಾಲಿವುಡ್​ ಸಹ ಇದರಿಂದ ಹೊರತಾಗಿಲ್ಲ. ವಾಟ್ಸಾಪ್​ ಮತ್ತು ಸ್ನಾಪ್​ ಚಾಟ್​ಗಳ ಮೂಲಕ ವ್ಯಸನಿಗಳನ್ನು ಸಂಪರ್ಕಿಸಿ ಡ್ರಗ್​ ಪೆಡ್ಲಿಂಗ್​ ಮಾಡುತ್ತಿದ್ದ ಬಾಲಿವುಡ್​ ನಟನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹೆಸರು ರೊಹುಲ್ಲಾಹ್​ ಮೆಹ್ದಿ. ಶಾಹಿದ್​ ಕಪೂರ್​ ನಟಿಸಿದ್ದ "ದೇವ' (2025) ಸೇರಿ ಕೆಲ ಸಿನಿಮಾಗಳು, ಸರಣಿ, ಧಾರಾವಾಹಿಗಳಲ್ಲಿ ನಟಿಸಿರುವ ಮೆಹ್ದಿ ಮಾಡೆಲಿಂಗ್​ ಲೋಕದಲ್ಲಿಯೂ ಗುರುತಿಸಿಕೊಂಡಿದ್ದಾನೆ. ಮಾದಕವಸ್ತು ಜಾಲವೊಂದು ಸಕ್ರಿಯವಾಗಿದ್ದು, ಎಂಡಿ (ಮೆಫಿಡ್ರೋನ್​) ಪೂರೈಸುತ್ತಿರುವ ಮಾಹಿತಿ ಮೇರೆಗೆ ಕಶಿಮೀರಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಕಲಿ ಗ್ರಾಹಕರ ಸೋಗಿನಲ್ಲಿ ಹೋದ ಅವರಿಗೆ ಕಾಸ್​ಿ ಎಂಬ ಪೆಡ್ಲರ್​ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ₹5.60 ಲಕ್ಷ ಮೌಲ್ಯದ 28 ಗ್ರಾಂ ಎಂಡಿ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾಸ್​ಿ, ರೊಹುಲ್ಲಾಹ್​ ಮೆಹ್ದಿಗಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಮೆಹ್ದಿ ಬೆನ್ನು ಹತ್ತಿರುವ ಪೊಲೀಸರು ಮಲಾಡ್​ನಲ್ಲಿ ಶೂಟಿಂಗ್​ನಲ್ಲಿ ಬಿಜಿಯಿದ್ದ ಆತನನ್ನು ಸೆಟ್​ನಲ್ಲಿಯೇ ಬಂಧಿಸಿದ್ದಾರೆ. ಆತನನ್ನು ಐದು ದಿನಗಳ ಕಾಲ ಪೊಲೀಸ್​ ವಶಕ್ಕೆ ನೀಡಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net