'ಬುಲೆಟ್‌ಪ್ರೂಫ್ ಗ್ಲಾಸ್ ಇದ್ದರೂ ಬಿಡಲ್ಲ'! ಅಮಿತಾಭ್, ಅಭಿಷೇಕ್​ ಬಚ್ಚನ್‌ಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಜೀವ ಬೆದರಿಕೆ | Amitabh Bachchan

 Amitabh Bachchan
'ಬುಲೆಟ್‌ಪ್ರೂಫ್ ಗ್ಲಾಸ್ ಇದ್ದರೂ ಬಿಡಲ್ಲ'! ಅಮಿತಾಭ್, ಅಭಿಷೇಕ್​ ಬಚ್ಚನ್‌ಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಜೀವ ಬೆದರಿಕೆ | Amitabh Bachchan
Published on: 

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‌ಗೆ ಇದೀಗ ಜೀವ ಬೆದರಿಕೆ ಎದುರಾಗಿದ್ದು, ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ದೆಹಲಿ ಪೊಲೀಸರು ಇತ್ತೀಚೆಗೆ ತನ್ನಿಬ್ಬರು ಸಹಚರರನ್ನು ಬಂಧಿಸಿದ್ದರೂ ಸಹ ಅಮಿತಾಭ್ ಬಚ್ಚನ್ ಟಾರ್ಗೆಟ್​ಗೆ ಯಾವುದೇ ಅಡ್ಡಿಯಾಗುವುದಿಲ್ಲ. ನೀವು ಹಾಕಿಕೊಂಡಿರುವ ಬುಲೆಟ್​ಪ್ರೂಫ್​ ಗಾಜು ಕೂಡ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ ಎಂದು ಆತ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ವಿಕಾಸ್ ಠಾಕೂರ್ ಮತ್ತು ದೀಪಕ್ ಸಿಂಗ್ ಬಂಧನದಿಂದ ನನ್ನ ಪ್ಲ್ಯಾನ್​ ಬದಲಾಗುವುದಿಲ್ಲ. ಮುಂಬೈನಲ್ಲಿ ಸುಮಾರು 200 ಮಂದಿ ಸಹಚರರು ಆಕ್ಟೀವ್ ಆಗಿದ್ದಾರೆ. ಸಿಖ್ ಸಮುದಾಯದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸುವುದಾಗಿ ಎಚ್ಚರಿಸಿರುವ ಗ್ಯಾಂಗ್​ಸ್ಟರ್​, ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಹೆಸರನ್ನೂ ಪ್ರಸ್ತಾಪಿಸಿರುವುದು ಸದ್ಯ ನಟರ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ.

ಅಮಿತಾಭ್ ಮನೆ ಮೇಲೆ ದಾಳಿ ಸಂಚು?

ಕೆಲವು ದಿನಗಳ ಹಿಂದಷ್ಟೇ ದೆಹಲಿ ಪೊಲೀಸರ ವಿಶೇಷ ಘಟಕವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಇಬ್ಬರು ಶಂಕಿತ ಶೂಟರ್‌ಗಳನ್ನು ಬಂಧಿಸಿತ್ತು. ಮುಂಬೈನಲ್ಲಿರುವ ಅಮಿತಾಭ್ ಬಚ್ಚನ್ ಅವರ ನಿವಾಸ 'ಜಲ್ಸಾ' ಎದುರು ಗುಂಡಿನ ದಾಳಿ ನಡೆಸುವ ಸಂಚಿನಲ್ಲಿ ಈ ಇಬ್ಬರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಂಧಿತರನ್ನು ಪಂಜಾಬ್‌ನ ಜಲಂಧರ್ ನಿವಾಸಿ ವಿಕಾಸ್ ಠಾಕೂರ್ ಅಲಿಯಾಸ್ ವಿಕ್ಕಿ ಮತ್ತು ತರಣ್ ತಾರಣ್ ನಿವಾಸಿ ದೀಪಕ್ ಸಿಂಗ್ ಅಲಿಯಾಸ್ ದೀಪ್ ಎಂದು ಗುರುತಿಸಲಾಗಿದೆ. ದೆಹಲಿಯ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡುವ ಮತ್ತೊಂದು ಸಂಚಿನ ಬಗ್ಗೆಯೂ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ವಿಕಾಸ್ ಠಾಕೂರ್‌ಗೆ ದೆಹಲಿಯ ಉದ್ಯಮಿಯ ಮೇಲೆ ಗುಂಡಿನ ದಾಳಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು ಎನ್ನಲಾಗಿದೆ. ಈ ಕಾರ್ಯಾಚರಣೆಗಾಗಿ ಆತ ಮುಂಬೈನಿಂದ ದೆಹಲಿಗೆ ತೆರಳಿದ್ದರೆ, ದೀಪಕ್ ಸಿಂಗ್ ಬಳಿಕ ಆತನನ್ನು ಸೇರಿಕೊಳ್ಳಬೇಕಿತ್ತು ಎಂದು ತಿಳಿದುಬಂದಿದೆ. ಈ ಎರಡೂ ಸಂಚುಗಳ ನಡುವೆ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1984ರ ಸಿಖ್ ವಿರೋಧಿ ಗಲಭೆ ಪ್ರಸ್ತಾಪ

ಗೋಲ್ಡಿ ಧಿಲ್ಲೋನ್ ತನ್ನ ಪೋಸ್ಟ್‌ನಲ್ಲಿ 1984ರ ಸಿಖ್ ವಿರೋಧಿ ಗಲಭೆಯ ವಿಚಾರವನ್ನೂ ಪ್ರಸ್ತಾಪಿಸಿದ್ದಾನೆ. ಆ ಹಿಂಸಾಚಾರಕ್ಕೆ ಕಾರಣರಾದವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಸಿಖ್ ಸಮುದಾಯದ ವಿರುದ್ಧ ಹೇಳಿಕೆ ನೀಡುವವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆದರಿಕೆಯೊಡ್ಡಿದ್ದಾನೆ.

Also Read
97 ಕೋಟಿ ಮತದಾರರ ದೇಶಕ್ಕೆ ಪ್ರಜಾಪ್ರಭುತ್ವದ ಪಾಠ ಬೇಕಿಲ್ಲ; ವಿದೇಶಿ ನಾಯಕನ ಟೀಕೆಗೆ ಮೆಲೋನಿ ಪಕ್ಷದ ನಾಯಕಿ ತಿರುಗೇಟು
 Amitabh Bachchan

ಜಲ್ಸಾ ನಿವಾಸಕ್ಕೆ ಹೆಚ್ಚಿದ ಭದ್ರತೆ

ಇತ್ತೀಚಿನ ದಿನಗಳಲ್ಲಿ ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸ 'ಜಲ್ಸಾ'ಗೆ ಬಾಂಬ್ ಬೆದರಿಕೆಗಳು ಬಂದ ಬೆನ್ನಲ್ಲೇ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಪ್ರತ್ಯೇಕ ಇ-ಮೇಲ್‌ಗಳ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿತ್ತು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನಿವಾಸದ ಸುತ್ತಮುತ್ತಲು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈಗ ಗೋಲ್ಡಿ ಧಿಲ್ಲೋನ್ ಹೆಸರಿನಲ್ಲಿ ಹರಿದಾಡುತ್ತಿರುವ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ಅವರ ಭದ್ರತೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಘಟನೆ ಬೆನ್ನಲ್ಲೇ ಮುಂಬೈ ಪೊಲೀಸರು ಹೈಅಲರ್ಟ್ ಆಗಿದ್ದು, ಪ್ರಕರಣದ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆಯನ್ನು ಚುರುಕುಗೊಳಿಸಿವೆ,(ಏಜೆನ್ಸೀಸ್).