ಬಾಲಿವುಡ್ ನಟ ಆಮಿರ್ ಖಾನ್ ಈಗಾಗಲೇ ‘ಮಂಗಲ್ ಪಾಂಡೆ: ದ ರೈಸಿಂಗ್’, (ಮಂಗಲ್ ಪಾಂಡೆ), ‘ದಂಗಲ್’ (ಮಹಾವೀರ್ ಸಿಂಗ್ ಪೋಗಟ್) ಬಯೋಪಿಕ್‌ಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿವೆ. ಅದರಲ್ಲೂ ‘ದಂಗಲ್’ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ದಾಖಲೆ ಬರೆದಿದೆ. ಆದರೆ, ಆ ಬಳಿಕ ಆಮಿರ್ ಮತ್ತೆ ಯಾವುದೇ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿಲ್ಲ. ಹಾಗೆಯೇ ದೊಡ್ಡ ಮಟ್ಟದ ಯಶಸ್ಸು ಕೂಡ ಅವರಿಗೆ ದಕ್ಕಿಲ್ಲ. ಅದಕ್ಕಾಗಿ ಆಮಿರ್ ಖಾನ್ ಮತ್ತೆ ಬಯೋಪಿಕ್‌ನತ್ತ ಮುಖ ಮಾಡಿದ್ದಾರೆ. ಅವರು ಭಾರತೀಯ ಕ್ರಿಕೆಟ್‌ನ ದಂತಕಥೆ ಲಾಲ ಅಮರ್‌ನಾಥ್ ಜೀವನಾಧಾರಿತ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ 10 ವರ್ಷಗಳ ಬಳಿಕ ಮತ್ತೊಮ್ಮೆ ಬಯೋಪಿಕ್‌ನಲ್ಲಿ ಮಿಂಚಲು ‘ಮಿ.ಪರ್ಪೆಕ್ಟ್ ಸಿದ್ಧರಾಗುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿರುವವರು ‘ಲಾಗಾನ್’ ಖ್ಯಾತಿಯ ಅಶುತೋಷ್ ಗೊವಾರಿಕರ್. ‘ಲಗಾನ್’ ತೆರೆಕಂಡು 25 ವರ್ಷಗಳ ಬಳಿಕ ಅಶುತೋಷ್- ಆಮಿರ್ ಜೋಡಿ ಒಂದಾಗುತ್ತಿದೆ. ಈ ಚಿತ್ರದಲ್ಲಿ ಲಾಲ ಅಮರನಾಥ್ ಜೀವನದ ಮೇಲೆ ಬೆಳೆಕು ಚೆಲ್ಲುವ ಜತೆಗೆ 1952ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯ ಮೇಲೆ ಹೆಚ್ಚು ಫೋಕಸ್ ಮಾಡಲಾಗುತ್ತಿದೆಯಂತೆ. ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ಮತ್ತೊಂದೆಡೆ ಈ ಬಯೋಪಿಕ್‌ಗಾಗಿ ಆಮಿರ್ ಖಾನ್ ‘3 ಈಡಿಯಟ್ಸ್’ ಚಿತ್ರವನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ. -ಏಜೆನ್ಸೀಸ್