Nimisha Sajayan - ಖಾಕಿ ಧರಿಸಲು 14 ಕೆಜಿ ಹೆಚ್ಚಿಸಿಕೊಂಡ ನಟಿ

Nimisha Sajayan
Nimisha Sajayan
Published on
Nimisha Sajayan -
ಸಾಮಾನ್ಯವಾಗಿ ನಟಿಯರು ತೆರೆಯ ಮೇಲೆ ದಪ್ಪಗೆ ಕಾಣಲು ಇಷ್ಟಪಡುವುದಿಲ್ಲ. ಒಮ್ಮೆ ತೂಕ ಹೆಚ್ಚಿಸಿಕೊಂಡರೆ ಇಳಿಸಿಕೊಳ್ಳುವುದು ಕಷ್ಟ ಎನ್ನುವುದು ಒಂದು ಕಾರಣವಾದರೆ, ಮತ್ತೊಂದು ಬೇರೆ ಚಿತ್ರಗಳು ಕೈತಪ್ಪುವ ಆತಂಕವಿರುತ್ತದೆ. ಹೀಗಾಗಿಯೇ ನಾಯಕಿಯರು ಕಟ್ಟುನಿಟ್ಟಿನ ಡಯಟ್​, ವರ್ಕೌಟ್​ ರೂಢಿಸಿಕೊಂಡಿರುತ್ತಾರೆ. ಆದರೂ, ಭೂಮಿ ಪೇಡ್ನೆಕರ್​ (ಧಮ್​ ಲಗಾಕೇ ಹೈಶಾ), ಕಂಗನಾ ರಣಾವತ್​ (ತಲೈವಿ), ಪರಿಣೀತಿ ಚೋಪ್ರಾ (ಅಮರ್​ ಸಿಂಗ್​ ಚಮ್ಕೀಲಾ), ವಿದ್ಯಾ ಬಾಲನ್​ (ದ ಡರ್ಟಿ ಪಿಕ್ಚರ್​), ಹುಮಾ ಖುರೇಷಿ (ಡಬಲ್​ ಎಕ್ಸ್​ಎಲ್​), ಅನುಷ್ಕಾ ಶೆಟ್ಟಿ (ಸೈಜ್​ ಜೀರೋ) ಸೇರಿ ಕೆಲ ನಟಿಯರು ತಮ್ಮ ಕಂಫರ್ಟ್​ ಜೋನ್​ನಿಂದ ಹೊರ ಬಂದು ಪಾತ್ರಗಳಿಗೆ ತೂಕ ಹೆಚ್ಚಿಸಿಕೊಂಡಿದ್ದಿದೆ. ಇದೀಗ ಈ ಸಾಲಿಗೆ ರಾಜ್ಯಪ್ರಶಸ್ತಿ ವಿಜೇತ ಮಲಯಾಳಂ ನಟಿ ನಿಮಿಷಾ ಸಜಾಯನ್​ ಕೂಡ ಸೇರಿದ್ದಾರೆ. ಅಂಬಿಕಾ ಪಂಡಿತ್​ ನಿರ್ದೇಶನದ ಹಿಂದಿ ಕೆಮ್​ ಡ್ರಾಮಾ "ಬಬಿತಾ ಸಿಂಗ್​ ರಿಪೋರ್ಟಿಂಗ್​'ಗಾಗಿ 14 ಕೆಜಿ ತೂಕ ಹೆಚ್ಚಿಸಿಕೊಂಡು, ಇದೀಗ ಮತ್ತೆ ಅಷ್ಟೇ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಈ ತೂಕದ ಜರ್ನಿ ಬಗ್ಗೆ ಅವರು, "ನಾನು ಬಬಿತಾ ಪಾತ್ರಕ್ಕಾಗಿ 58 ಕೆಜಿಯಿಂದ 72 ಕೆಜಿವರೆಗೆ 14 ಕಿಲೋ ತೂಕ ಹೆಚ್ಚಿಸಿಕೊಂಡಿದ್ದೆ. ಆದರೆ, ತೂಕ ಇಳಿಸಿಕೊಳ್ಳುವಾಗ ತುಂಬ ಕಷ್ಟಗಳನ್ನು ಎದುರಿಸಿದೆ. ಮೊದಲ 10 ದಿನಗಳ ಕಾಲ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ನಿದ್ರಾಹಿನತೆ, ಮೂಡ್​ ಸ್ವಿಂಗ್ಸ್​, ಹತಾಶೆ, ಸುಸ್ತು... ಹೀಗೆ ಹಲವು ಬಾರಿ ನನ್ನಿಂದ ಇನ್ನಾಗಲ್ಲ ಅಂತ ಟ್ರೇನರ್​ ಮುಂದೆ ಕುಳಿತು ಕಣ್ಣೀರು ಹಾಕಿದ್ದಿದೆ. ಈಗ ಒಮ್ಮೆ ಹಿಂದಿರುಗಿ ಈ ಜರ್ನಿಯನ್ನು ನೋಡಿದರೆ ತಾಳ್ಮೆ ಮತ್ತು ನಂಬಿಕೆ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ. ನಾನೇ ನಂಬಿಕೆ ಕಳೆದುಕೊಂಡಾಗ ಗಟ್ಟಿಯಾಗಿ ನಿಂತು ಧೈರ್ಯ ತುಂಬಿದ ಟ್ರೇನರ್​ ಶಿುಗೆ ಧನ್ಯವಾದಗಳು' ಎಂದು ಹೇಳಿಕೊಂಡಿದ್ದಾರೆ. "ಬಬಿತಾ ಸಿಂಗ್​ ರಿಪೋರ್ಟಿಂಗ್​'ನಲ್ಲಿ ನಿಮಿಷಾ ಮಧ್ಯಪ್ರದೇಶದ ಎಎಸ್​ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಿದೆ. ಸದ್ಯ ಅವರು "ಎನ್ನ ವಿಳೈ' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net