Rahul Roy - ಹೌದು, ಮದುವೆಗಳಲ್ಲಿ ಕುಣಿಯುತ್ತೇನೆಂದ ಆಶಿಕಿ ನಟ ರಾಹುಲ್ ರಾಯ್

Rahul Roy
Rahul Roy
Published on
Rahul Roy -
ಬಾಲಿವುಡ್​ ನಟ ರಾಹುಲ್​ ರಾಯ್​ ಅಭಿನಯದ "ಆಶಿಕೀ' (1990) ಬಿಡುಗಡೆಯಾಗಿ 38 ವರ್ಷಗಳಾಗಿವೆ. ಆದರೆ, ಈಗಲೂ ಆ ಸಿನಿಮಾದ ಹಾಡುಗಳು ಹಲವರಿಗೆ ಫೇವರಿಟ್​. ಹೀಗೆ ಮೊದಲ ಚಿತ್ರದ ಮೂಲಕವೇ ರಾತ್ರೋ ರಾತ್ರಿ ಸ್ಟಾರ್​ ಆದ ರಾಹುಲ್​, ಸಿನಿಮಾ ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಬರೋಬ್ಬರಿ 47 ಚಿತ್ರಗಳಿಗೆ ಸೈನ್​ ಮಾಡಿದ್ದರು. ಆದರೆ, "ಜುನೂನ್​', "ಗುಮ್ರಾಹ್​', "ಸಪ್ನೇ ಸಾಜನ್​ ಕೇ', "ಫಿರ್​ ತೇರಿ ಕಹಾನಿ ಯಾದ್​ ಆಯೀ' ಹೊರತುಪಡಿಸಿದರೆ, 1990ರ ದಶಕದಲ್ಲಿ ಅವರು ನಟಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫಿಸಿನಲ್ಲಿ ಮಕಾಡೆ ಮಲಗಿದವು. ಕ್ರಮೇಣ ಪೋಷಕ ಪಾತ್ರಗಳಿಗೆ ಸೀಮಿತರಾದ ಅವರು, ವಯಕ್ತಿಕ ಜೀವನದಲ್ಲೂ ಹಿನ್ನಡೆ ಅನುಭವಿಸಿದರು. 14 ವರ್ಷಗಳ ದಾಂಪತ್ಯ ಜೀವನದ ಬಳಿಕ 2014ರಲ್ಲಿ ರಾಹುಲ್​ ಮತ್ತು ರಾಜಲಕ್ಷ್ಮೀ ವಿಚ್ಛೇದನ ಪಡೆದರು. ಆ ಸಮಯದಲ್ಲಿ ಮಾಜಿ ದಂಪತಿ ನಡುವೆ ಆಸ್ತಿ ವಿವಾದವೂ ಸುದ್ದಿಯಾಗಿತ್ತು. ಇನ್ನು 2020ರಲ್ಲಿ ಬ್ರೈನ್​ ಸ್ಟ್ರೋಕ್​​ ಆದ ಕಾರಣ, ಚಿಕಿತ್ಸೆಗೂ ಹಣವಿಲ್ಲದೇ ರಾಹುಲ್​ ಪರದಾಡುವಂತಾಯಿತು. ಇದೀಗ ಮದುವೆಗಳಲ್ಲಿ ಡಾನ್ಸ್​ ಮಾಡುವ ಮೂಲಕ ರಾಹುಲ್​ ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ದುಸ್ಥಿತಿಯ ಬಗ್ಗೆ ಇತ್ತೀಚೆಗಷ್ಟೆ ಮೌನ ಮುರಿದಿರುವ ಅವರು, "2020ರಲ್ಲಿ ಅನಾರೋಗ್ಯಕ್ಕೀಡಾದ ಬಳಿಕ ನನಗೆ ತೀವ್ರ ಹಣದ ಅವಶ್ಯಕತೆ ಇತ್ತು. ಮತ್ತೊಂದೆಡೆ ಸಿನಿಮಾಗಳಲ್ಲಿ ಅವಕಾಶ ಇರಲಿಲ್ಲ. ಹೀಗಾಗಿ ಹಣಕ್ಕಾಗಿ ಬಂದ ಕೆಲಸವೆಲ್ಲ ಮಾಡತೊಡಗಿದೆ. ಮದುವೆಗಳಲ್ಲಿ ಡಾನ್ಸ್​ ಮಾಡಲು ₹2ರಿಂದ ₹4 ಲಕ್ಷ ನೀಡುತ್ತಾರೆ. ನಾನಿನ್ನೂ ಚಿಕಿತ್ಸೆ ಪಡೆಯುತ್ತಿದ್ದೇನೆ, ಸಾಕಷ್ಟು ಖರ್ಚುಗಳಿವೆ' ಎಂದು ಹೇಳಿಕೊಂಡಿದ್ದಾರೆ.

ಕೋಟ್​:

ಬ್ರೈನ್​ ಸ್ಟ್ರೋಕ್​​ ಬಳಿಕ ನಾನು ಮೊದಲಿನಂತೆ ಮತ್ತೆ ಎದ್ದು ಓಡಾಡುತ್ತೇನೆ ಅಂತ ನಂಬಿಕೆಯೇ ಇರಲಿಲ್ಲ. ಪ್ರತಿದಿನ ಬೆಳಗ್ಗೆ 8 ಬಗೆಯ ಔಷಧ ತೆಗೆದುಕೊಳ್ಳುತ್ತಿದ್ದೆ. ಕ್ರಮೇಣ ಜೀವನಶೈಲಿ ಬದಲಿಸಿಕೊಂಡೆ. ಧೂಮಪಾನ ಬಿಟ್ಟೆ, ಮಾಂಸಾಹಾರ ಪ್ರಿಯನಾಗಿದ್ದವನು ಸಸ್ಯಾಹಾರಿಯಾಗಿದ್ದೇನೆ. ಈರುಳ್ಳಿ, ಬೆಳ್ಳುಳ್ಳಿ, ಹಾಲನ್ನೂ ತ್ಯಜಿಸಿ, ಜೈನರ ಆಹಾರಪದ್ಧತಿ ರೂಢಿಸಿಕೊಂಡಿದ್ದೇನೆ. ಈಗೀಗ ಆರೋಗ್ಯ ಸುಧಾರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net