ಕನ್ನಡದಲ್ಲೂ ಬಿಡುಗಡೆಯಾಗಲಿದೆ ಬಾಲಿವುಡ್​ನ ಬಿಗ್​ ಸಿನಿಮಾ ಬ್ರಹ್ಮಾಸ್ತ್ರ

ALIYA
Published on

ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್ ಕನ್ನಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಅವರ ಅಭಿನಯದ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಹೌದು, ‘ಬ್ರಹ್ಮಾಸ್ತ್ರ’ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಜತೆ ಕನ್ನಡ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ‘ಧರ್ಮ ಪ್ರೊಡಕ್ಷನ್’ನಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ‘ಯೇ ಜವಾನಿ ಹೈ ದಿವಾನಿ’ ಖ್ಯಾತಿಯ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

‘ಬ್ರಹ್ಮಾಸ್ತ್ರ’ಕ್ಕಾಗಿ ಅಯಾನ್ ಕೆಲಸ ಮಾಡಿದ್ದು ಬರೋಬ್ಬರಿ ಆರು ವರ್ಷ. ಕಳೆದ ವರ್ಷವೇ ತೆರೆ ಕಾಣಬೇಕಿದ್ದ ಚಿತ್ರ, ತಾಂತ್ರಿಕ ಕಾರಣಗಳಿಂದ ತಡವಾಗಿತ್ತು. ಇದು ಅಭಿಮಾನಿಗಳಲ್ಲೂ ಬೇಸರ ಮೂಡಿಸಿತ್ತು. ಇದೀಗ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದು, ಇದೇ ವರ್ಷ ಡಿ.4ರಂದು ‘ಬ್ರಹ್ಮಾಸ್ತ್ರ’ ಪ್ರಯೋಗ ಆಗಲಿದೆ. ಈ ಬಗ್ಗೆ ಬಿಗ್ ಬಿ, ರಣಬೀರ್, ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಬಳಗ ಇದ್ದು, ರಣಬೀರ್ ಕಪೂರ್​ಗೆ ಜತೆಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.

ನಾಗಾರ್ಜುನ ಅಕ್ಕಿನೇನಿ, ಡಿಂಪಲ್ ಕಪಾಡಿಯಾ ಹಾಗೂ ‘ಕೆಜಿಎಫ್’ ಚಿತ್ರದ ‘ಗಲಿ ಗಲಿ’ ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್ ಅಭಿನಯಿಸಿದ್ದಾರೆ. ಅಲ್ಲದೆ, ಅತಿಥಿ ಪಾತ್ರದಲ್ಲಿ ನಟ ಶಾರುಖ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net