

| ಹರ್ಷವರ್ಧನ್ ಬ್ಯಾಡನೂರು
ಇತ್ತೀಚೆಗೆ ಬಾಯ್ಕಾಟ್ ಬಿಸಿಗೆ ಬಾಲಿವುಡ್ನ ಕೆಲವು ಚಿತ್ರಗಳು ಬಲಿಯಾಗಿವೆ. ಆಮಿರ್ ಖಾನ್, ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’, ಅಕ್ಷಯ್ ಕುಮಾರ್ ಅಭಿನಯದ ‘ರಕ್ಷಾಬಂಧನ್’, ಅನುರಾಗ್ ಕಶ್ಯಪ್ ನಿರ್ದೇಶಿಸಿ, ತಾಪ್ಸೀ ಪನ್ನು ನಟಿಸಿರುವ ‘ದೊಬಾರಾ’ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ಸಿನಿಮಾ ನೋಡಬೇಡಿ ಅಂತ ಯಾರೂ ಬೀದಿಗಿಳಿದಿಲ್ಲ, ಪ್ರತಿಭಟನೆ ಮಾಡಿಲ್ಲ, ಬದಲಾಗಿ ಸಾಮಾಜಿಕ ಜಾಲತಾಣದಲ್ಲೇ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ಬಾಯ್ಕಾಟ್ ಮಾಡಿದ್ದಾರೆ.
ಬಾಯ್ಕಾಟ್ ಬಿಸಿಗೆ ಬಲಿಯಾದ ಚಿತ್ರಗಳು: ‘ಲಾಲ್ ಸಿಂಗ್ ಛಡ್ಡಾ’ ಬಾಯ್ಕಾಟ್ ಮಾಡಲು ಕಾರಣ ನಟ ಆಮಿರ್ ಖಾನ್ ಅವರ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂಬ ಹೇಳಿಕೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ‘ಪಿಕೆ’ ಮತ್ತು ಭಾರತಕ್ಕೆ ಪ್ರತಿ ವಿಷಯದಲ್ಲೂ ಅಡ್ಡಗಾಲು ಹಾಕುವ ಟರ್ಕಿ ದೇಶದ ಪ್ರಧಾನಿ ಎರ್ಡೆಗಾನ್ ಭೇಟಿ ... ಹಾಗೆಯೇ ನಟಿ ಕರೀನಾ ಕಪೂರ್ ಸಹ ‘ಇಷ್ಟವಿಲ್ಲದಿದ್ದರೆ ನನ್ನ ಚಿತ್ರಗಳನ್ನು ನೋಡಬೇಡಿ’ ಎಂದು ನೀಡಿದ್ದ ಹೇಳಿಕೆ, ಜತೆಗೆ ಚಿತ್ರಕ್ಕೆ ಕಥೆ ಬರೆದಿದ್ದ ಅತುಲ್ ಕುಲಕರ್ಣಿಯವರ ಟ್ವೀಟ್ಗಳೂ ಕಾರಣ ಎನ್ನಲಾಗಿದೆ.
ಹಾಗೆಯೇ ಸಿಎಎ, ಎನ್ಆರ್ಸಿ ವೇಳೆ ‘ರಕ್ಷಾಬಂಧನ್’ ಚಿತ್ರದ ಕಥೆಗಾರ್ತಿ ಕನ್ನಿಕಾ ಧಿಲ್ಲೋನ್ ಅವರ ಕೆಲವು ಟ್ವೀಟ್ಗಳು ಜನರ ಭಾವನೆಗೆ ಧಕ್ಕೆ ತಂದಿದ್ದು, ಅದೇ ಕಾರಣಕ್ಕೆ ಆ ಚಿತ್ರದ ಬಾಯ್ಕಾಟ್ ಮಾಡಲಾಗಿದೆ. ಇನ್ನು ಬಾಯ್ಕಾಟ್ ಟ್ರೆಂಡ್ಅನ್ನು ಅವಹೇಳನ ಮಾಡುತ್ತಾ ನಮ್ಮನ್ನೂ ಬಾಯ್ಕಾಟ್ ಮಾಡಿ ಎಂದು ಕೊಂಕು ಮಾತನಾಡಿದ ಅನುರಾಗ್ ಕಶ್ಯಪ್ ಮತ್ತು ತಾಪ್ಸೀ ಪನ್ನು ಆಸೆಯನ್ನು ಪ್ರೇಕ್ಷಕರು ನೆರವೇರಿಸಿದ್ದಾರೆ. ಅದರ ಫಲಿತಾಂಶ ಎಂಬಂತೆ ಬಿಡುಗಡೆಯಾದ ದಿನವೇ ಹಲವೆಡೆ ಚಿತ್ರದ ಶೋಗಳು ಕ್ಯಾನ್ಸಲ್ ಆಗಿದ್ದು, ಎರಡನೇ ವಾರ ಬಂದರೂ 5 ಕೋಟಿ ರೂ. ಕೂಡ ಗಳಿಕೆಯಾಗಿಲ್ಲ.
ಸ್ಪೋಟಗೊಂಡಿದೆ ಅಸಹನೆ: ಸಿನಿಮಾಗಳು ಸಮಾಜದ ಕನ್ನಡಿ ಎಂಬ ಮಾತಿದೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿರುವಂತೆಯೇ, ಸಿನಿಮಾ ನೋಡಿ ಅಪರಾಧ ಎಸಗಿರುವ ಹಲವು ಉದಾಹರಣೆಗಳಿವೆ. ಅದರಲ್ಲಿ ಮಹಿಳೆಯರನ್ನು ರಸ್ತೆಯಲ್ಲಿ ಚುಡಾಯಿಸುವ ಸನ್ನಿವೇಶ ಇರಬಹದು, ಡಬಲ್ ಮೀನಿಂಗ್ ಸಂಭಾಷಣೆಗಳು, ಜಾತಿ, ಧರ್ಮ, ಆಚರಣೆ, ದೇವರನ್ನು ಅವಹೇಳನ ಮಾಡಿರುವ ಸೀನ್ಗಳು ಹಲವು ಸಿನಿಮಾಗಳಲ್ಲಿವೆ. ಬಹುತೇಕ ಎಲ್ಲವೂ ಹಿಂದೂಗಳ ಭಾವನೆಗೆ ಧಕ್ಕೆ ತರುವ ಸನ್ನಿವೇಶಗಳೇ ಆಗಿವೆ. ಹೀಗಾಗಿಯೇ ಸಿನಿಮಾಗಳ ಮೂಲಕ ಒಳ್ಳೆಯ ವಿಷಯಗಳಿಗಿಂತ ಹೆಚ್ಚಾಗಿ ಕೆಟ್ಟ ವಿಷಯಗಳನ್ನೇ ಹೇಳಲಾಗುತ್ತಿದೆ ಎಂಬ ಭಾವನೆ ಹಲವರದು. ಈ ಎಲ್ಲ ವಿಷಯಗಳನ್ನೂ ಇದುವರೆಗೆ ಸುಮ್ಮನೆ ನೋಡಿಕೊಂಡು ಬರುತ್ತಿದ್ದ ಪ್ರೇಕ್ಷಕವರ್ಗ, ಸೋಷಿಯಲ್ ಮೀಡಿಯಾ ಮೂಲಕ ಸಿಡಿದೆದ್ದಿದೆ. ಈಗ ಬಾಲಿವುಡ್ ಮಂದಿಗೆ ತಮ್ಮ ಯೋಚನಾಲಹರಿಯನ್ನು ಬದಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ದಕ್ಷಿಣ ವರ್ಸಸ್ ಬಾಲಿವುಡ್ ಹೋಲಿಕೆಯಿಂದ ಈಗಾಗಲೇ ಬಾಲಿವುಡ್ ಮಂದಿ ನಗೆಪಾಟಲಿಗೀಡಾಗಿದ್ದು, ಅದರ ಜತೆಗೆ ಈ ಬಾಯ್ಕಾಟ್ ಟ್ರೆಂಡ್ ಮತ್ತಷ್ಟು ತಲೆಬಿಸಿಗೆ ಕಾರಣವಾಗಿದೆ. ಇದುವರೆಗೆ ಆಡಿದ್ದೇ ಆಟ ಎಂಬಂತಿದ್ದ ಬಿಟೌನ್ ಮಂದಿ, ಇನ್ನಾದರೂ ತಾವು ನೀಡುವ ಕಂಟೆಂಟ್ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಿದೆ. ಮನರಂಜನೆ ಹೆಸರಿನಲ್ಲಿ ಎಲ್ಲವೂ ಮಾರಾಟವಾಗುತ್ತದೆ ಎಂದು ಯೋಚಿಸುವ ಬದಲು, ಉತ್ತಮ ಸಮಾಜ ನಿರ್ವಿುಸಲು ಮೌಲ್ಯಯುತ ಕಂಟೆಂಟ್ ನೀಡಬೇಕಿದೆ. ಇಲ್ಲದಿದ್ದರೆ ಬಾಯ್ಕಾಟ್ ಬೇಗೆಯಲ್ಲಿ ಬಾಲಿವುಡ್ ಬೇಯಬೇಕಾಗುತ್ತದೆ ...
ಮುಂದುವರಿದಿದೆ ಬಾಯ್ಕಾಟ್ ಟ್ರೆಂಡ್!: ಹಾಗಂತ ಈ ಬಾಯ್ಕಾಟ್ ಟ್ರೆಂಡ್ ಇಲ್ಲಿಗೇ ನಿಂತಿಲ್ಲ. ಬದಲಾಗಿ ಗುರುವಾರ ಬಿಡುಗಡೆಯಾದ ‘ಲೈಗರ್’, ಮುಂದೆ ತೆರೆಗೆ ಬರಲಿರುವ ‘ಬ್ರಹ್ಮಾಸ್ತ್ರ’, ‘ವಿಕ್ರಂ ವೇದ’, ‘ಪಠಾಣ್’ ಸೇರಿದಂತೆ ಹಲವು ಚಿತ್ರಗಳು ಮುಂದಿನ ಟಾರ್ಗೆಟ್ ಆಗಿವೆ. ‘ಲೈಗರ್’ ಚಿತ್ರದ ‘ಆಫತ್’ ಹಾಡಿನಲ್ಲಿರುವ ‘ಭಗವಾನ್ ಕೇ ಲಿಯೇ ಮುಝೇ ಛೋಡ್ದೋ’ ಎಂಬ ಸಾಲು, ಬಾಯ್ಕಾಟ್ ಬಗ್ಗೆ ನಾಯಕ ವಿಜಯ್ ದೇವರಕೊಂಡ ಹೇಳಿಕೆ ಹಾಗೂ ನಿರ್ವಪಕ ಕರಣ್ ಜೋಹರ್ ಸ್ಟಾರ್ ಮಕ್ಕಳಿಗಷ್ಟೇ ಸಿನಿಮಾ ಮಾಡುತ್ತಾರೆ ಎಂಬ ಆರೋಪ. ಬಾಯ್ಕಾಟ್ ನಡುವೆಯೂ ಹೃತಿಕ್ ರೋಷನ್ ‘ಲಾಲ್ ಸಿಂಗ್ ಛಡ್ಡಾ’ಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಅವರು ನಟಿಸಿರುವ ‘ವಿಕ್ರಮ್ ವೇದ’ ಚಿತ್ರದ ಬಾಯ್ಕಾಟ್ಗೆ ಕರೆ ನೀಡಲಾಗಿದೆ. ಕರೀನಾ ಅವರಂತೆಯೇ ಆಲಿಯಾ ಭಟ್, ‘ಇಷ್ಟವಿಲ್ಲದಿದ್ದರೆ ನನ್ನ ಸಿನಿಮಾ ನೋಡಬೇಡಿ’ ಎಂಬ ಬೇಜವಾಬ್ದಾರಿ ಹೇಳಿಕೆ ಹಾಗೂ ‘ಬ್ರಹ್ಮಾಸ್ತ್ರ’ ಟೀಸರ್ನಲ್ಲಿ ರಣಬೀರ್ ಕಪೂರ್ ಶೂ ಧರಿಸಿಯೇ ದೇವಸ್ಥಾನದ ಘಂಟೆ ಬಾರಿಸುವ ಸೀನ್ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು,‘ರಯೀಸ್’ನಲ್ಲಿ ಅಂಡರ್ವರ್ಲ್ಡ್ ಡಾನ್ ಪಾತ್ರವನ್ನು ವೈಭವೀಕರಿಸಿದ್ದ ಶಾರುಖ್ ಖಾನ್, ‘ಪಠಾಣ್’ ಚಿತ್ರದಲ್ಲೂ ಅಂಥದ್ದೇ ಪಾತ್ರ ಮಾಡುತ್ತಿದ್ದು, ಅವರ ಅಸಹಿಷ್ಣುತೆ ಹೇಳಿಕೆ ಮತ್ತು ಪಾಕ್ ಕ್ರಿಕೆಟ್ ಆಟಗಾರರ ಬಗ್ಗೆ ಮೃದು ಧೋರಣೆ ಬಾಯ್ಕಾಟ್ಗೆ ಕಾರಣವಾಗಿದೆ.