ಕನ್ನಡಕ್ಕೆ ಬಾಲಿವುಡ್ ಅನನ್ಯಾ

ananya feb 20 2020
Published on

ಬೆಂಗಳೂರು: ಇತ್ತೀಚೆಗಷ್ಟೇ ‘ಡಿಯರ್ ಕಾಮ್ರೆಡ್’ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದ ಟಾಲಿವುಡ್ ನಟ ವಿಜಯ್ ದೇವರಕೊಂಡ, ಈಗ ಮತ್ತೊಂದು ಸಿನಿಮಾ ಹಿಡಿದು ಸ್ಯಾಂಡಲ್​ವುಡ್​ಗೆ ಆಗಮಿಸುತ್ತಿದ್ದಾರೆ. ಬರಿ ಅವರಷ್ಟೇ ಬರುತ್ತಿಲ್ಲ ಅವರೊಂದಿಗೆ ಬಾಲಿವುಡ್ ನಟಿಯನ್ನೂ ಕರೆತರುತ್ತಿದ್ದಾರೆ! ಯಾರವರು? ಅನನ್ಯಾ ಪಾಂಡೆ.

ಹೌದು, ಕರಣ್ ಜೋಹರ್ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್-2’ ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಖಾತೆ ತೆರೆದಿದ್ದ ಅನನ್ಯಾ, ಅದಾದ ಬಳಿಕ ‘ಪತಿ ಪತ್ನಿ ಔರ್ ವೋ’ ಸಿನಿಮಾದಲ್ಲೂ ನಟಿಸಿದ್ದರು. ಈಗ ನೇರವಾಗಿ ದಕ್ಷಿಣದತ್ತ ಮುಖ ಮಾಡಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಸಿದ್ಧಗೊಳ್ಳಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿದ್ದಾರೆ. ವಿಶೇಷ ಏನೆಂದರೆ, ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಪರಿಕಲ್ಪನೆಯ ಸಿನಿಮಾಗಳು ಹೆಚ್ಚಾಗುತ್ತಿವೆ. ಆ ಸಾಲಿಗೆ ಈ ಚಿತ್ರವೂ ಸೇರ್ಪಡೆಯಾಗಲಿದೆ. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ನಿರ್ವಣವಾಗಿ ಬಿಡುಗಡೆ ಆಗಲಿದೆ.

ಈ ಹಿಂದೆ ಪುರಿ ಜಗನ್ನಾಥ್ ‘ಇಸ್ಮಾರ್ಟ್ ಶಂಕರ್’ ಸಿನಿಮಾ ನಿರ್ದೇಶಿಸಿದ್ದರು. ಬಾಕ್ಸ್ ಆಫೀಸ್​ನಲ್ಲಿ ಆ ಚಿತ್ರ ಒಳ್ಳೇ ಕಮಾಯಿ ಮಾಡಿತ್ತು. ಈಗ ವಿಜಯ್ ದೇವರಕೊಂಡ ಜತೆ ಕೈ ಜೋಡಿಸಿದ್ದಾರೆ. ಬಾಲಿವುಡ್​ನ ಖ್ಯಾತ ಫಿಲಂ ಮೇಕರ್ ಕರಣ್ ಜೋಹರ್, ನಟಿ-ನಿರ್ವಪಕಿ ಚಾರ್ವಿು ಕೌರ್, ಅಪೂರ್ವ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಶೂಟಿಂಗ್ ಸಹ ಶುರುವಾಗಿದೆ. ಇನ್ನುಳಿದಂತೆ ಶೀಘ್ರದಲ್ಲಿ ಚಿತ್ರದ ಶೀರ್ಷಿಕೆಯನ್ನೂ ಚಿತ್ರತಂಡ ರಿವೀಲ್ ಮಾಡಲಿದ್ದು, ತಾರಾಗಣದ ಪರಿಚಯ ವನ್ನೂ ಮಾಡಲಿದೆಯಂತೆ. ಇನ್ನು ವಿಜಯ್ ನಾಯಕತ್ವದ ‘ವರ್ಲ್ಡ್ ಫೇಮಸ್ ಲವರ್’ ಸಿನಿಮಾ ಕಳೆದ ವಾರವಷ್ಟೇ ತೆರೆಕಂಡಿತ್ತಾದರೂ, ಪ್ರೇಕ್ಷಕರ ಮನಗೆಲ್ಲು ವಲ್ಲಿ ಚಿತ್ರ ವಿಫಲವಾಗಿದೆ. ಹಾಗಾಗಿ ಆ ಸೋಲಿನ ನೋವನ್ನು ಮರೆಮಾಚುವ ಉದ್ದೇಶಕ್ಕಾಗಿಯೇ ಈ ಸಿನಿಮಾ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net