

| ಹರ್ಷವರ್ಧನ್ ಬ್ಯಾಡನೂರು
ಬಾಲಿವುಡ್ನ ಹೆಸರಾಂತ ಕಪೂರ್ ಮನೆತನಕ್ಕೆ ಸೇರಿದ ಹುಡುಗಿ ಶನಾಯಾ ಕಪೂರ್. ಅಪ್ಪ ಸಂಜಯ್ ಕಪೂರ್ ಮತ್ತು ದೊಡ್ಡಪ್ಪ ಅನಿಲ್ ಕಪೂರ್ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ಗಳಾಗಿದ್ದರೆ, ಮತ್ತೊಬ್ಬ ದೊಡ್ಡಪ್ಪ ಬೋನಿ ಕಪೂರ್ ನಿರ್ಮಾಣದಲ್ಲಿ ದೊಡ್ಡ ಹೆಸರು. ಇದೀಗ ಶನಾಯಾ "ಆಂಖೋನ್ ಕಿ ಗುಸ್ತಾಖಿಯಾ' ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಂತೋಷ್ ಸಿಂಗ್ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ಶನಾಯಾ "12 ಫೇಲ್', "ಮಿಜಾಪುರ್' ಖ್ಯಾತಿಯ ವಿಕ್ರಾಂತ್ ಮಸ್ಸೆಗೆ ಜೋಡಿಯಾಗಿದ್ದು, ಸಿನಿಮಾ ಇದೇ ಜು. 11ರಂದು ತೆರೆಗೆ ಬರಲಿದೆ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಶನಾಯಾ ಮುಕ್ತವಾಗಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
* ಆಂಖೋನ್ ಕಿ ಗುಸ್ತಾಖಿಯಾ ತಂಡ ಸೇರಿದ್ದು ಹೇಗೆ?
- ನಾನು ಬೇರೆ ಪ್ರಾಜೆಕ್ಟ್ ಆಡಿಷನ್ಗೆ ಹೋಗಿದ್ದೆ. ಆಡಿಷನ್ ಚೆನ್ನಾಗಿ ಆಯಿತು. ಆದರೆ ಆ ಪ್ರಾಜೆಕ್ಟ್ ಪ್ರಾರಂಭವಾಗಲಿಲ್ಲ. ಆದರೆ, ಆ ಆಡಿಷನ್ ವಿಡಿಯೋ ನೋಡಿದ ಈ ಚಿತ್ರದ ನಿರ್ದೇಶಕ ಸಂತೋಷ್, ನನ್ನನ್ನು ಭೇಟಿ ಮಾಡಿದರು. ಕಥೆ ಹೇಳಿದರು. ಇಷ್ಟವಾಯಿತು. ತಂಡ ಸೇರಿಕೊಂಡೆ. ಇದು ಹೊಸ ರೀತಿಯ, ಶುದ್ಧ, ಪ್ರಾಮಾಣಿಕ ಕಥೆ. ಪ್ರತಿ ಸೀನ್ನಲ್ಲೂ ಪ್ಯೂರಿಟಿ ಇದೆ. ಮನರಂಜನೆಯ ಜತೆಗೆ ಪ್ರೀತಿಯ ಬಗ್ಗೆ ತುಂಬ ಕಲಿಯುವ ವಿಷಯಗಳಿವೆ.
* ನಿಮ್ಮ ಪಾತ್ರ ಮಹಾಭಾರತದ ಗಾಂಧಾರಿಯನ್ನು ನೆನಪಿಸುವಂತಿದೆ. ಸಿದ್ಧತೆ ಹೇಗಿತ್ತು?
- ಹೌದು, ಚಿತ್ರದ ಹಾಡುಗಳು ಮತ್ತು ಟೀಸರ್ ನೋಡಿದ ಹಲವರು ಈ ಹೋಲಿಕೆ ಮಾಡಿದ್ದಾರೆ. ಖುಷಿ ಮತ್ತು ಹೆಮ್ಮೆಯಾಗುತ್ತಿದೆ. ಆದರೆ, ಕಥೆ ಬಿಟ್ಟುಕೊಡುವಂತಿಲ್ಲ. ಹೀಗಾಗಿ ಈಗಲೇ ನಾನೇನೂ ಹೇಳಲಾರೆ. ನಾನಿಲ್ಲಿ ರಂಗಭೂಮಿಕೆ ಕಲಾವಿದೆ ಪಾತ್ರದಲ್ಲಿ ನಟಿಸಿದ್ದೇನೆ. ಕಥೆ ಕೇಳುವಾಗಲೇ ಕಣ್ಣಿಲ್ಲದಂತೆ ನಟಿಸುವುದು ಹೇಗೆ ಅಂತ ಸ್ವಲ್ಪ ನರ್ವಸ್ ಆಗಿದ್ದೆ. ಕಲಾವಿದರಿಗೆ ಕಣ್ಣೇ ಮುಖ್ಯ. ಕಣ್ಣಿಲ್ಲದೇ ಭಾವನೆಗಳನ್ನು ತೋರಿಸುವುದು, ಜನರಿಗೆ ಅರ್ಥ ಮಾಡಿಸುವುದು ಸವಾಲಿನ ಕೆಲಸ. ಹೀಗಾಗಿಯೇ 10 ದಿನಗಳ ವರ್ಕ್ಶಾಪ್ ಮಾಡಿದೆ. ಕಣ್ಣಿಗೆ ಪಟ್ಟಿ ಧರಿಸಿ ಬೀಚ್ನಲ್ಲಿ ಓಡಾಡುತ್ತಿದ್ದೆ, ಹಲ್ಲು ಉಜ್ಜುವುದು ಸೇರಿ ಹಲವು ಟಾಸ್ಕ್ಗಳನ್ನು ಮಾಡಿದೆ. ಬಾಡಿ ಲಾಂಗ್ವೇಜ್, ಕಂಠದ ಏರಿಳಿತ ಎಲ್ಲದರ ಬಗ್ಗೆಯೂ ಗಮನಹರಿಸಿದೆ. ಈ ಪಾತ್ರಕ್ಕೆ ಸಿದ್ಧತೆಯೇ ಸವಾಲಿನ ಹಾಗೂ ಸುಂದರ ಜರ್ನಿ.
* ವಿಕ್ರಾಂತ್ ಮಸ್ಸೆ ಜತೆ ನಟಿಸಿದ ಅನುಭವ ಹೇಗಿತ್ತು?
- ಅದ್ಭುತವಾಗಿತ್ತು. ಅವರ ಜತೆ ನಟಿಸಲು ಅವಕಾಶ ಸಿಕ್ಕಿದ್ದೇ ದೊಡ್ಡ ವಿಷಯ. ನಿರ್ದೇಶಕರು ವರ್ಕ್ಶಾಪ್ ಕೊನೆಯ ದಿನ ನನಗೆ ಇಷ್ಟು ದಿನ ಕಲಿತಿದ್ದನ್ನು ಮರೆತುಬಿಡು, ಸೆಟ್ನಲ್ಲಿ ವಿಕ್ರಾಂತ್ ಏನು ಮಾಡುತ್ತಾರೆ? ಏನು ಹೇಳುತ್ತಾರೆ? ನೋಡಿ, ಕೇಳಿ ಕಲಿ ಎಂದರು. ನಾನು ಅದನ್ನೇ ಫಾಲೋ ಮಾಡಿದೆ. ವಿಕ್ರಾಂತ್ರಿಂದ ಮತ್ತಷ್ಟು ಉತ್ತಮ ಕಲಾವಿದೆಯಾದೆ.
* ನಿಮ್ಮ ಕುಟುಂಬದಲ್ಲೇ ಹಲವು ಸ್ಟಾರ್ಗಳಿದ್ದಾರೆ.
- ಹೌದು, ಸೆಟ್ನಲ್ಲಿ ಹೀಗಾಯಿತು, ಹಾಗಾಯಿತು ಅಂತ ಹಾಗೇ ಬೇರೆ ಸಿನಿಮಾಗಳ ಕುರಿತು ಚರ್ಚಿಸುತ್ತಿರುತ್ತೇವೆ. ಜತೆಗೆ ನನ್ನ ಕೆಲಸದ ಬಗ್ಗೆ ಎಲ್ಲರ ಪ್ರತಿಕ್ರಿಯೆ ಪಡೆಯುತ್ತೇನೆ. ಹೊಸ ಕಥೆ ಬಂದಾಗ ಅಪ್ಪ, ಅಮ್ಮನ ಜತೆ ಡಿಸ್ಕಸ್ ಮಾಡುತ್ತೇನೆ. ಅಪ್ಪ ಕಥೆ ಕೇಳಿ ಅವರ ಅಭಿಪ್ರಾಯ ತಿಳಿಸುತ್ತಾರೆ. ಬಳಿಕ ನಾನು ಮಾಡಬಲ್ಲೆನಾ? ಇದು ವಿಭಿನ್ನವಾಗಿದೆಯಾ? ಅಂತ ನಾನೇ ನಿರ್ಧರಿಸುತ್ತೇನೆ. ಸಿನಿಮಾ ಅಂತಲ್ಲ ನನ್ನ ಬದುಕಿನ ಎಲ್ಲ ವಿಷಯಗಳಲ್ಲೂ ಅಪ್ಪ, ಅಮ್ಮನ ಬಳಿ ಸಲಹೆ ಪಡೆಯುತ್ತೇನೆ.
* ಕನ್ನಡ ಸಿನಿಮಾ ನೋಡಿದ್ದೀರಾ?- ಕೆಲಸದ ನಿಮಿತ್ತ ಬೆಂಗಳೂರಿಗೆ ಹಲವು ಬಾರಿ ಬಂದಿದ್ದೇನೆ. ನನಗೆ ನಟಿ ರಾಗಿಣಿ ದ್ವಿವೇದಿ ಗೊತ್ತು. ಅವರಿಂದಲೂ ಆಗಾಗ ಸಿನಿಮಾಗಳ ಬಗ್ಗೆ ಸಲಹೆ ಪಡೆಯುತ್ತಿರುತ್ತೇನೆ. ಕನ್ನಡ ಸೇರಿ ಹಲವು ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿದ್ದೇನೆ.