

ಬೆಂಗಳೂರು: ಪಟಾಕಿ ಬಗ್ಗೆ ಹೇಳಿಕೆ ನೀಡಿ ಹಲವು ಚರ್ಚೆಗೆ ಕಾರಣವಾಗಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ‘ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಬಂದಿಲ್ಲ. ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಅದರ ಪ್ರಸ್ತಾಪವಿಲ್ಲ. ವಿದೇಶಿಗರ ಆಗಮನಿದಿಂದ ನಮ್ಮ ದೇಶಕ್ಕೆ ಪಟಾಕಿಗಳು ಬಂದವು' ಎಂದು ರೂಪಾ ಸೋಷಿಯಲ್ ಮೀಡಿಯಾದಲ್ಲಿ ಪಟಾಕಿ ಬ್ಯಾನ್ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಇದೀಗ ಆ ಹೇಳಿಕೆ ಒಂದಷ್ಟು ವಿವಾದಕ್ಕೆ ಕಾರಣವಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ನಿಮ್ಮಂಥವರನ್ನು ಸರ್ಕಾರ ನೇಮಕಮಾಡಿಕೊಳ್ಳುವುದು ಸಾಮಾನ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲೆಂದು. ಆದರೆ ನೀವು ಮಾಡುತ್ತಿರುವುದೇನು. ಖಚಿತ ಮಾಹಿತಿಯನ್ನು ಒದಗಿಸಿದರೂ ಅದರೊಂದಿಗೆ ಸೆಣಸಾಡದ ನೀವು ಟ್ರು ಇಂಡೊಲಜಿ ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡಿಸಿದ್ದೀರಿ. ನಿಮಗೆ ನಾಚಿಗೆಯಾಗಬೇಕು ಎಂದಿದ್ದಾರೆ.
ಇದನ್ನೂ ಓದಿ: ಶಿವಣ್ಣ- ಧನಂಜಯ್ ಚಿತ್ರದ ಮುಹೂರ್ತಕ್ಕೆ ದಿನಾಂಕ ಫಿಕ್ಸ್
ದೇಶದ ಹಲವೆಡೆ ಮತ್ತು ಕರ್ನಾಟಕದಲ್ಲಿಯೂ ದೀಪಾವಳಿ ಪ್ರಯುಕ್ತ ಆಯಾ ರಾಜ್ಯಗಳ ಸರ್ಕಾರಗಳು ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದವು. ಅದರಂತೆ ಕರ್ನಾಟಕದಲ್ಲಿಯೂ ಪಟಾಕಿ ನಿಷೇಧಿಸಲಾಗಿತ್ತು. ಆ ನಿಷೇಧದ ಕುರಿತು ಐಪಿಎಸ್ ಅಧಿಕಾರಿ ಡಿ. ರೂಪಾ, ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಪಟಾಕಿ ಪ್ರಸ್ತಾಪವೇ ಇಲ್ಲ ಎಂದಿದ್ದರು. ಪ್ರಸ್ತಾಪವಿದೆ ಎಂದು ವಾದಿಸಿದವರ ಟ್ವಿಟರ್ ಖಾತೆಗಳನ್ನೂ ಬ್ಲಾಕ್ ಮಾಡಿಸಿದ್ದರು. ಸಾಕಷ್ಟು ಟ್ರೋಲ್ ಸಹ ಆಗಿದ್ದರು.