ಗುಟ್ಖಾ, ಪಾನ್​ ಮಸಾಲಾ ಪ್ರಚಾರ ಮಾಡುವ ಸ್ಟಾರ್​ಗಳು ಸಾವಿನ ವ್ಯಾಪಾರಿಗಳು!

John Abraham (7)
Published on

ಬಾಲಿವುಡ್​ನ ಅತ್ಯಂತ ಫಿಟ್​ ತಾರೆಯರಲ್ಲಿ ನಟ ಜಾನ್​ ಅಬ್ರಹಾಂ ಕೂಡ ಒಬ್ಬರು. 2003ರಲ್ಲಿ "ಜಿಸ್ಮ್​' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಾನ್​, ಇದುವರೆಗೆ "ಧೂಮ್​', "ಗರಂ ಮಸಾಲಾ', "ನೋ ಸ್ಮೋಕಿಂಗ್​' ಸೇರಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಬಂದಾಗ ಹೇಗಿದ್ದರೂ ಇದೀಗ 51ರ ಹರೆಯದರಲ್ಲೂ ಜಾನ್​ ಅದೇ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಜತೆಗೆ ಮದ್ಯಪಾನ, ಧೂಮಪಾನ, ಗುಟ್ಖಾ, ಪಾನ್​ ಮಸಾಲಾ ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವ ಉತ್ಪನ್ನಗಳನ್ನೂ ಪ್ರಚಾರ ಮಾಡದೇ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದೇ ತಮ್ಮದೇ ಕೆಲ ತತ್ವಗಳನ್ನು ಪಾಲಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

ಇತ್ತೀಚೆಗಷ್ಟೆ ಪಾನ್​, ಗುಟ್ಖಾ ಜಾಹೀರಾತುಗಳಲ್ಲಿ ನಟಿಸುವ ಬೇರೆ ತಾರೆಯರ ಬಗ್ಗೆ, "ನಾನು ಪ್ರಾಮಾಣಿಕನಾಗಿದ್ದರೆ. ನಾನೇನು ಉಪದೇಶ ನೀಡುತ್ತೀನೋ, ಅದರಂತೆಯೇ ಬದುಕಬೇಕು. ಹಾಗಿದ್ದರೆ ಮಾತ್ರ ನನ್ನನ್ನು ರೋಲ್​ ಮಾಡೆಲ್​ ಎನ್ನಬಹುದು. ಆದರೆ, ನಾನು ಸಾರ್ವಜನಿಕವಾಗಿ ಒಂದು ರೀತಿ, ಖಾಸಗಿಯಾಗಿ ಇನ್ನೊಂದು ರೀತಿ ಇದ್ದರೆ ಅದು ಗೊತ್ತಾಗಿಬಿಡುತ್ತೆ. ಫಿಟ್ನೆಸ್​ ಬಗ್ಗೆ ಮಾತನಾಡುವವರೇ ಪಾನ್​ ಮಸಾಲಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ. ನಾನು ನನ್ನ ಚಿತ್ರರಂಗದ ಗೆಳೆಯರುನ್ನು ಪ್ರೀತಿಸುತ್ತೇನೆ. ಅವರಿಗೆ ಅಗೌರವ ತೋರಿಸುತ್ತಿಲ್ಲ. ಪಾನ್​ ಮಸಾಲಾ ಉತ್ಪನ್ನಗಳು ಭಾರತದಲ್ಲಿ ವಾರ್ಷಿಕ 45 ಸಾವಿರ ಕೋಟಿ ವಹಿವಾಟು ನಡೆಸುತ್ತವೆ. ಸರ್ಕಾರವೂ ಅದನ್ನು ಅಕ್ರಮ ಅಂತ ಘೋಷಿಸಿಲ್ಲ. ಹೀಗಾಗಿ ಸಾವನ್ನು ಮಾರುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜಾನ್​.

ಸದ್ಯ ಅವರು ನಟಿಸಿರುವ "ವೇದ' ಇದೇ 15ರಂದು ರಿಲೀಸ್​ ಆಗಲಿದೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net