ರಾಜ್ಯದಲ್ಲಿ ಬಿಟ್​ಕಾಯಿನ್ ಸಂಚಲನ: ಸಿಎಂ ಹೆಸರು ಎಳೆದು ತಂದ ಕಾಂಗ್ರೆಸ್, ಕೈನಾಯಕರ ಹೆಸರಿದೆ ಎಂದ ಬಿಜೆಪಿ..

Bit Coin
Published on

ಬೆಂಗಳೂರು: ರಾಜ್ಯದಲ್ಲಿ ಬಿಟ್ಟೂ ಬಿಡದೆ ಚರ್ಚೆಯಾಗುತ್ತಿರುವ ‘ಬಿಟ್​ಕಾಯಿನ್’ ವಿಚಾರವಾಗಿ ಆರೋಪ-ಪ್ರತ್ಯಾರೋಪಗಳು ಸ್ಪೋಟಕ ತಿರುವು ಪಡೆದುಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇಷ್ಟು ದಿನ ಬಿಟ್​ಕಾಯಿನ್ ವಿಚಾರದಲ್ಲಿ ಪ್ರಭಾವಿಗಳಿದ್ದಾರೆಂದು ಹೇಳಲಾಗುತ್ತಿತ್ತಾದರೂ ಇದೀಗ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಕಾಂಗ್ರೆಸ್ ಎಳೆದು ತಂದಿದೆ. ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರ ಹೆಸರುಗಳು ಮತ್ತದಕ್ಕೆ ಪೂರಕ ದಾಖಲೆ ಬಿಡುಗಡೆ ಮಾಡಿದೆ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಈ ಹಗರಣದ ಮುಖ್ಯ ಕೊಂಡಿಯಾಗಿದ್ದು, ಕಾಂಗ್ರೆಸ್, ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಆತನ ಹೆಸರಿದೆ.

ಸಿಎಂ ಹೆಸರು ಪ್ರಸ್ತಾಪ: ಬಿಟ್​ಕಾಯಿನ್ ಹಗರಣ ಸಿಎಂ ಬೊಮ್ಮಾಯಿ ಸ್ಥಾನಕ್ಕೆ ಸಂಚಕಾರ ತರಲಿದ್ದು, ರಾಜ್ಯವು ಇಷ್ಟರಲ್ಲೇ ಮೂರನೇ ಮುಖ್ಯಮಂತ್ರಿಯನ್ನು ನೋಡಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲ ಬಾರಿಗೆ ಸಿಎಂ ಹೆಸರನ್ನು ಎಳೆದು ತಂದಿದ್ದಾರೆ. ಇದು ಬೊಮ್ಮಾಯಿ ಅವರಲ್ಲೂ ಇರಿಸುಮುರಿಸು ತಂದಿದೆ.

ಕಾಂಗ್ರೆಸ್ ನಾಯಕರು ಕೇವಲ ಬಿಜೆಪಿ ಎಂದಷ್ಟೇ ಆರೋಪಿಸುತ್ತಿದ್ದರು. ಆದರೆ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಈ ಹಗರಣ ಮುಖ್ಯಮಂತ್ರಿ ಹುದ್ದೆಗೆ ಸಂಚಕಾರ ತರಲಿದೆ ಎಂದಿದ್ದಾರೆ. ಪ್ರಿಯಾಂಕ ಖರ್ಗೆ ಹೇಳಿಕೆ ನಂತರ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಟೀಕೆ-ಪ್ರತಿಟೀಕೆ ಮಾಡುತ್ತಿದ್ದಾರೆ. ಜೆಡಿಎಸ್ ಸಹ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹಣಿಯಲೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ಆರೋಪದ ಅಖಾಡಕ್ಕೆ ಇಳಿದಿದ್ದಾರೆ. ಉತ್ತಮ ಅಭಿವೃದ್ಧಿ ಕೆಲಸಗಳಿಂದ ಸರ್ಕಾರದ ವರ್ಚಸ್ಸು ಹೆಚ್ಚುತ್ತಿದೆ. ಈ ಕಾರಣಕ್ಕೆ ಅಪಪ್ರಚಾರ ನಡೆಸಿ ಜನರ ದಿಕ್ಕು ತಪ್ಪಿಸುವ ಷಡ್ಯಂತ್ರ ಹೂಡಲಾಗಿದೆ ಎಂದು ಬಿಜೆಪಿ ಪ್ರತ್ಯಾರೋಪಿಸಿದೆ.

ಪತ್ರಗಳು ಸೃಷ್ಟಿಸಿದ ಕಂಪನ: ಈ ಮಧ್ಯೆ ಬೆಂಗಳೂರು ಮೂಲದ ಫೌಂಡೇಷನ್ ಹಾಗೂ ಎನ್​ಆರ್​ಐ ಎನ್ನಲಾದ ಸಾಮಾಜಿಕ ಕಾರ್ಯಕರ್ತರೊಬ್ಬರ ಪತ್ರಗಳು ಬುಧವಾರ ಬಹಿರಂಗವಾಗಿ ಕಂಪನ ಸೃಷ್ಟಿಸಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬೆಂಗಳೂರು ಫೌಂಡೇಷನ್ ಪತ್ರ ಬರೆದು, ದೇಶ- ವಿದೇಶದ ನಂಟು ಹೊಂದಿರುವ ಬಿಟ್ ಕಾಯಿನ್ ಹಗರಣದ ತನಿಖೆ ನೇರವಾಗಿ ಕೋರ್ಟ್ ನಿಗಾದಲ್ಲಿ ನಡೆಯಬೇಕು ಎಂದು ಬಯಸಿದ್ದಾರೆ.

ಪ್ರಕರಣದ ತನಿಖಾ ಪ್ರಗತಿ ಬಗ್ಗೆ ಪ್ರತಿದಿನ ವರದಿ ಸಲ್ಲಿಸಬೇಕು. ಶಾಮೀಲಾದ ಅಧಿಕಾರಿಗಳನ್ನು ಹೊರಗಿಟ್ಟು ಈ ಜಾಲ ಬೇಧಿಸಬೇಕು ಎಂದು ಪತ್ರದಲ್ಲಿ ಮೊರೆಯಿಡಲಾಗಿದೆ. ಎನ್​ಆರ್​ಐ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾದ ಮತ್ತೊಬ್ಬರು ಪ್ರಧಾನಮಂತ್ರಿಗೆ ಬರೆದ ಗೌಪ್ಯಪತ್ರದಲ್ಲಿ ಅನೇಕ ಸ್ಪೋಟಕ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಹಿಂದಿನ ಜೆಡಿಎಸ್-ಕಾಂಗ್ರೆಸ್ ಹಾಗೂ ಈಗಿನ ಬಿಜೆಪಿ ಸರ್ಕಾರಕ್ಕೆ ಬಿಟ್ ಕಾಯಿನ್ ಹಗರಣವು ಹಾಲು ಹಿಂಡುವ ಹಸುವಿನಂತಾಗಿದ್ದು, ರಾಷ್ಟ್ರದ ಆಂತರಿಕ ಭದ್ರತೆಗೆ ಧಕ್ಕೆ ತರುವ ಬಹು ದೊಡ್ಡ ಆರ್ಥಿಕ ಅಪರಾಧವಾಗಿದೆ ಎಂದು ದೂರಿದ್ದಾರೆ. ಕರ್ನಾಟಕದ ಪ್ರಭಾವಿ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿರುವ ಬಗ್ಗೆ ಅಮೆರಿಕ ಪ್ರವಾಸದ ವೇಳೆ ಅಲ್ಲಿನ ತನಿಖಾ ಸಂಸ್ಥೆಯೊಂದು ಪ್ರಧಾನಿ ಗಮನಕ್ಕೆ ತಂದಿದೆ ಎನ್ನುವುದನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಟ್​ಕಾಯಿನ್ ಪ್ರಕರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಲೇಸು. ಇದರಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳೂ ಇವೆ. ಆ ಬಗ್ಗೆ ಕಾಂಗ್ರೆಸ್ ನಾಯಕರು ಚಿಂತನೆ ಮಾಡಲಿ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರು ಬಹಿರಂಗಪಡಿಸಿ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು. ತಾವು ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಮುಖ್ಯಮಂತ್ರಿ ಜಾರಿಕೊಳ್ಳಬಾರದು.

| ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ.

ಬಿಟ್​ಕಾಯಿನ್ ಪ್ರಕರಣ ಮುಚ್ಚಿ ಹಾಕಲು ರಾಷ್ಟ್ರೀಯ ಪಕ್ಷಗಳು ಪ್ರಯತ್ನಿಸುತ್ತಿವೆ. ಈ ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಸರ್ಕಾರ ಪ್ರಚಾರಕ್ಕೆ ಮಾತ್ರ ರ್ಚಚಿಸಿ, ನಂತರ ನಿರ್ಲಕ್ಷ್ಯ ಮಾಡುವುದು ಬೇಡ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಕೇಳಿ ಬಂದಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

| ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

ಸಜ್ಜನ, ಸಂಭಾವಿತ ಮುಖ್ಯಮಂತ್ರಿ ಎಂದು ಬಸವರಾಜ ಬೊಮ್ಮಾಯಿ ಹೆಸರು ಗಳಿಸುತ್ತಿದ್ದು, ಉತ್ತಮ ಅಭಿವೃದ್ಧಿ ಕೆಲಸಗಳಿಂದಾಗಿ ಸರ್ಕಾರ ವರ್ಚಸ್ಸು ಹೆಚ್ಚುತ್ತಿದೆ. ಇದನ್ನು ಸಹಿಸಲಾಗದ ಊಹೆ ಮೇಲೆ ಸುಳ್ಳು ಆರೋಪ ಹೊರಿಸಿ, ಜನರ ದಿಕ್ಕು ತಪ್ಪಿಸುವ ಷಡ್ಯಂತ್ರ ಹೂಡಲಾಗಿದೆ.

| ವಿ.ಸೋಮಣ್ಣ, ವಸತಿ ಸಚಿವ.

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಬಗ್ಗೆ ದಾಖಲೆ ಇದ್ದರೆ ಬಂಧಿಸಲಿ, ಅದನ್ನು ಬಿಟ್ಟು ಗೃಹ ಸಚಿವರು ಬರೀ ಮಾತನಾಡುವುದು ಬೇಡ. ಇಡಿ ತನಿಖೆ ಏನಾಗಿದೆ? ಎಷ್ಟು ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಯಾವ ವಾಲೆಟ್​ನಲ್ಲಿವೆ? ಎಷ್ಟು ಎಫ್​ಐಆರ್ ದಾಖಲಾಗಿವೆ ಎಂಬ ಮಾಹಿತಿ ಮೊದಲು ನೀಡಲಿ.

| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಬಿಟ್ ಕಾಯಿನ್ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲೆದಂಡವಾಗಲಿದ್ದು, ರಾಜ್ಯ ಈ ಬಾರಿಯೂ ಮೂರನೇ ಮುಖ್ಯಮಂತ್ರಿಯನ್ನು ಕಾಣಲಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದೆ.

| ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net