

ಬೆಂಗಳೂರು: ಸಿನಿಮಾ ತಾರೆಯರು ಎಂದರೆ ಅವರ ಬಹುತೇಕ ಎಲ್ಲ ಖುಷಿಯ ಸಂದರ್ಭಗಳಲ್ಲಿ ಅಭಿಮಾನಿಗಳ ಉಪಸ್ಥಿತಿ ಇದ್ದೇ ಇರುತ್ತದೆ. ಆದರೆ, ಈ ಸಲದ ಬೇಸಿಗೆಯಲ್ಲಿ ನಟರಿಬ್ಬರ ಜನ್ಮದಿನ ಫ್ಯಾನ್ಸ್ ಇಲ್ಲದೆ ನಡೆಯುತ್ತಿದೆ.
ಅರ್ಥಾತ್, ಪುನೀತ್ ರಾಜ್ಕುಮಾರ್ ಹಾಗೂ ಜಗ್ಗೇಶ್ ಅವರ ಜನ್ಮದಿನ ಅಭಿಮಾನಿಗಳ ಸಂಪರ್ಕವಿಲ್ಲದೆ ನಡೆಯಲಿದೆ. ಇದಕ್ಕೆಲ್ಲ ಕಾರಣ, ಕರೊನಾ.ಕರೊನಾ ಸೋಂಕು ತಗುಲದಂತೆ ಹಾಗೂ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಹಲವಾರು ನಿರ್ಬಂಧಗಳನ್ನು ಹೇರಿದ್ದು, ಅವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರದಿರುವುದೂ ಪ್ರಮುಖವಾದದ್ದು. ಅದಕ್ಕೆ ಚಿತ್ರರಂಗ ಸೇರಿ ಹಲವು ಕ್ಷೇತ್ರಗಳು ಕೈಜೋಡಿಸಿವೆ.
ಚಿತ್ರೋದ್ಯಮ ಸ್ಥಗಿತಗೊಂಡಿದ್ದರೆ, ಬಹಳಷ್ಟು ಚಿತ್ರಗಳ ನಿರ್ವಣದ ಚಟುವಟಿಕೆಗಳೂ ಮುಂದೂಡಲ್ಪಟ್ಟಿವೆ. ಇದನ್ನು ಸಿನಿಮಾ ಕಲಾವಿದರು ವೃತ್ತಿಪರವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಪಾಲಿಸಲು ಮುಂದಾಗಿದ್ದಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವುದನ್ನು ತಪ್ಪಿಸಲು ತೀರಾ ಖಾಸಗಿಯಾಗಿ ಜನ್ಮದಿನವನ್ನು ಕಳೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಈಗಾಗಲೇ ಮನವಿಯನ್ನೂ ಮಾಡಿಕೊಂಡಿದ್ದಾರೆ. ‘ಸಮಸ್ತ ಅಭಿಮಾನಿ ದೇವರುಗಳೇ, ಈ ವರ್ಷ ನಾನು ಹುಟ್ಟಿದ್ದ ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಮಾ. 17ಕ್ಕೆ ಯಾರೂ ತಂತಮ್ಮ ಊರಿನಿಂದ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ. ಕರೊನಾ ಬಾಧೆ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ನಾವೆಲ್ಲ ಸೇರಿ ಕೈಜೋಡಿಸಬೇಕಾದ್ದು ಅನಿವಾರ್ಯ’ ಎಂಬುದಾಗಿ ಪುನೀತ್ ವಿಡಿಯೋ ತುಣುಕಿನ ಮೂಲಕ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ.
ಮಾ. 17ರಂದು ಅವರ ‘ಜೇಮ್್ಸ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ. ಇನ್ನು ಜಗ್ಗೇಶ್ ಬರ್ತ್ಡೇ ಕೂಡ ಮಾ. 17ರಂದೇ ಇದ್ದು, ಎರಡು ದಿನ ಮುಂಚಿತವಾಗಿ ಅವರು ಮಂತ್ರಾಲಯದ ಶ್ರೀಗುರು ರಾಘವೇಂದ್ರರ ಸನ್ನಿಧಿಗೆ ತೆರಳಿದ್ದು, ಅಲ್ಲಿ ಆಪ್ತೇಷ್ಟರ ಬಳಗದೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.