ಅನಂತ್ ನಾಗ್ ಹುಟ್ಟುಹಬ್ಬಕ್ಕೆ ವಿಜಯಾನಂದ ವಿಶೇಷ ಗಿಫ್ಟ್; ಚಿತ್ರತಂಡದಿಂದ ಟೀಸರ್ ಬಿಡುಗಡೆ

Ananth nag 1
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಅನಂತ್ ನಾಗ್, ಶನಿವಾರ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ವಿಜಯಾನಂದ’ ಚಿತ್ರದ ನಿರ್ವಪಕ ಆನಂದ ಸಂಕೇಶ್ವರ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ‘ವಿಜಯಾನಂದ’ ಚಿತ್ರದಲ್ಲಿನ ಅನಂತ್ ನಾಗ್ ಅವರ ಪಾತ್ರವನ್ನು ಪರಿಚಯಿಸುವ ಫಸ್ಟ್ ಲುಕ್ ಟೀಸರ್​ನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ವಿಆರ್​ಎಲ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ಆನಂದ ಸಂಕೇಶ್ವರ ಅವರು ತಮ್ಮ ತಂದೆ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನ ಮತ್ತು ಸಾಧನೆಯನ್ನಾಧರಿಸಿ ‘ವಿಜಯಾನಂದ’ ಎಂಬ ಚಿತ್ರವನ್ನು ನಿರ್ವಿುಸುತ್ತಿದ್ದು, ಈ ಚಿತ್ರದಲ್ಲಿ ಅನಂತ್ ನಾಗ್ ಅವರು ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ. ಸಂಕೇಶ್ವರ್ ಅವರ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರವನ್ನು ಪರಿಚಯಿಸುವ ಮತ್ತು ಹುಟ್ಟುಹಬ್ಬಕ್ಕೆ ಶುಭಕೋರುವ ಟೀಸರ್​ನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್​ನ ವಿಆರ್​ಎಲ್ ಪ್ರೊಡಕ್ಷನ್ಸ್ ಚಾನಲ್​ನಲ್ಲಿ ಈ ಟೀಸರ್ ಬಿಡುಗಡೆಯಾಗಿದೆ.

ಕಚ್ಚೆ ಪಂಚೆ, ಕೋಟು, ಪಗಡಿಯಲಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದು, ಉತ್ತರ ಕರ್ನಾಟಕದ ಸೊಗಡಿನಲ್ಲಿ ಮಾತನಾಡಿದ್ದಾರೆ, ‘ಕೆಲಸ, ದುಡಿಮಿ, ಸಾಧನ ಅಂತ ಸದಾ ಕುದ್ರಿ ಮ್ಯಾಲೆ ಕುಂತಿರ್ತೀಯಲ್ಲೋ ವಿಜಯ್. ನಿನಗೆ ದಣಿವಾಗೋದಿಲ್ಲ ಅನ್ನೋದು ಖರೆ. ಆದ್ರೆ, ಕುದ್ರಿ ಕಥೀ ಏನು? ದೊಡ್ಡ ಮನ್ಸು ಮಾಡಿ, ಕೆಳಗಿಳೀ ಸಾವ್ಕಾರ. ಆ ಕುದ್ರಿನೂ ಸ್ವಲ್ಪ ಹುಲ್ತಿಂದು ವಿಶ್ರಾಂತಿ ತಗೊಳ್ಲಿ ...’ ಎಂದು ಅನಂತ್ ನಾಗ್ ಸಂಭಾಷಣೆ ಹೇಳುವ ಈ ಟೀಸರ್ ಬಗ್ಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ವಿಜಯಾನಂದ ಟೀಸರ್ ನನ್ನ ಹುಟ್ಟುಹಬ್ಬದ ದಿನದಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿ.ಜಿ.ಸಂಕೇಶ್ವರ ಅವರ ಪಾತ್ರವನ್ನು ನಾನೇ ಮಾಡಬೇಕೆಂದು ವಿಜಯ ಸಂಕೇಶ್ವರ ಅವರು ಸಲಹೆ ನೀಡಿದ್ದರಂತೆ. ನಾನು ಏನು ಸಾಧನೆ ಮಾಡಿದ್ದೇನೆ, ಅದು ತಂದೆಯ ಮಾರ್ಗದರ್ಶನದಿಂದ. ಆ ಪಾತ್ರವನ್ನು ಅನಂತ್​ನಾಗ್ ಅವರು ಮಾಡಿದಲ್ಲಿ ಮಾತ್ರ ಬಯೋಪಿಕ್​ಗೆ ಒಪ್ಪಿಗೆ ನೀಡುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ. ಅವರ ಆಶಯದಂತೆ ಒಂದು ಉತ್ತಮ ಪಾತ್ರ ನನಗೆ ದಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಅನಂತ್​ನಾಗ್.

ಜೀವ ತುಂಬುವ ಪಾತ್ರ

ತಮ್ಮ ತಂದೆ ಬಸವಣ್ಣೆಪ್ಪ ಗುರುಲಿಂಗಪ್ಪ ಸಂಕೇಶ್ವರ (ಬಿ.ಜಿ. ಸಂಕೇಶ್ವರ) ಅವರ ಪಾತ್ರವನ್ನು ಅನಂತ್ ನಾಗ್ ನಿರ್ವಹಿಸಿದರೆ ಚೆನ್ನ ಎಂದು ಸ್ವತಃ ವಿಜಯ ಸಂಕೇಶ್ವರ ಅವರು ಆಸೆ ಪಟ್ಟಿದ್ದರಂತೆ. ಹಾಗಂತ ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಅನಂತ್ ನಾಗ್ ಅವರ ಪಾತ್ರ 1950ರಿಂದ 1980ರ ಕಾಲಘಟ್ಟದವರೆಗೂ ಬರುತ್ತದೆ. ಈ ಪಾತ್ರವನ್ನು ಬರೆಯುವಾಗ, ಚರ್ಚೆ ಮಾಡುವಾಗಲೇ, ಅನಂತ್ ನಾಗ್​ರಂತಹ ನಟರು ಮಾಡಿದರೆ ಚೆನ್ನಾಗಿರುತ್ತದೆ ಎಂದನಿಸಿತ್ತು. ವಿಜಯ ಸಂಕೇಶ್ವರ ಅವರು ಸಹ ಅನಂತ್ ನಾಗ್ ಆ ಪಾತ್ರ ಮಾಡಲಿ ಎಂದು ಆಸೆಪಟ್ಟಿದ್ದರು. ಆ ಆಸೆ ಈಡೇರಿದೆ. ಅದೊಂದು ಬಹಳ ಶಿಸ್ತಿನ ಪಾತ್ರ. ಅವರು ತೆರೆಯ ಮೇಲೆ ಬಂದರೆ, ತೆರೆಗೆ ಜೀವ ಬಂದಂತಾಗುತ್ತದೆ. ಏಕೆಂದರೆ, ವಿಜಯ ಸಂಕೇಶ್ವರ ಮತ್ತು ಅವರ ತಂದೆಯ ಪಾತ್ರಗಳ ನಡುವೆ ಸಾಕಷ್ಟು ಎಮೋಷನ್​ಗಳಿವೆ. ಹಾಗೆ ನೋಡಿದರೆ, ಇದು ಮೂರು ತಲೆಮಾರುಗಳ ಕುರಿತಾದ ಚಿತ್ರ. ಬಿ.ಜಿ. ಸಂಕೇಶ್ವರ, ವಿಜಯ ಸಂಕೇಶ್ವರ ಮತ್ತು ಆನಂದ ಸಂಕೇಶ್ವರ ಅವರ ಪಾತ್ರಗಳು ಒಂದೊಂದು ತಲೆಮಾರನ್ನು ಪ್ರತಿನಿಧಿಸಲಿದ್ದು, ಈ ಪೈಕಿ ಮಗ ಮತ್ತು ಮೊಮ್ಮಗನ ಜತೆಗಿನ ಬಿ.ಜಿ. ಸಂಕೇಶ್ವರ ಅವರ ಒಡನಾಟವನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ತಂದೆಯಾಗಿ, ತಾತನಾಗಿ ಅವರು ಹೇಗೆ ಸಹಕಾರ, ಪ್ರೋತ್ಸಾಹ ನೀಡುತ್ತಾರೆ ಎಂಬ ಅಂಶವನ್ನು ಚಿತ್ರದಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ. ಇದೇ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದ್ದು, ಹುಬ್ಬಳ್ಳಿ ಮತ್ತು ಹೈದರಾಬಾದ್​ನ ರಾಮೋಜಿ ಫಿಲಂಸಿಟಿಯಲ್ಲಿ ಅನಂತ್ ನಾಗ್ ಅವರ ಭಾಗದ ಚಿತ್ರೀಕರಣ ಮಾಡಲಾಗುತ್ತದೆ’ ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net